ಇಂಫಾಲ್: ಮಣಿಪುರದ ಉಖ್ರುಲ್ ಪಟ್ಟಣದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
'ಸ್ವಚ್ಛತಾ ಅಭಿಯಾನ'ದ ಅಂಗವಾಗಿ ಪಟ್ಟಣದ ವಿವಾದಿತ ಜಾಗವನ್ನು ಸ್ವಚ್ಛಗೊಳಿಸುವ ವಿಚಾರವಾಗಿ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ.
ಮೃತ ಮೂವರಲ್ಲಿ ಒಬ್ಬರು ರಾಜ್ಯ ಸರ್ಕಾರದ ಅಧೀನದ ಸಶಸ್ತ್ರ ಪಡೆ ಮಣಿಪುರ ರೈಫಲ್ಸ್‌ನ ಕರ್ತವ್ಯದಲ್ಲಿದ್ದವರು. ತೀವ್ರವಾಗಿ ಗಾಯಗೊಂಡ ಹತ್ತು ಮಂದಿಯನ್ನು ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಉಖ್ರುಲ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂಸಾಚಾರದ ವೇಳೆ, ಅಸ್ಸಾಂ ರೈಫಲ್ಸ್ ಶಿಬಿರದಿಂದ ಕೆಲವೇ ಮೀಟರ್ ದೂರದಲ್ಲಿರುವ ಉಖ್ರುಲ್ ಪೊಲೀಸ್ ಠಾಣೆ ಮೇಲೂ ದಾಳಿ ನಡೆದಿದೆ.
'ಉಖ್ರುಲ್ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ, ಬಹುಪಾಲು ಯುವಕರೇ ಇದ್ದ ಗುಂಪೊಂದು ವಿನೋ ಬಜಾರ್‌ನಲ್ಲಿರುವ ಪೊಲೀಸ್ ಠಾಣೆಗೆ ನುಗ್ಗಿತು. ಠಾಣೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಪರಾರಿಯಾಯಿತು' ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಗಾ ಜನರು ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.
'ಯಾವ ಬಗೆಯ ಮತ್ತು ಎಷ್ಟು ಶಸ್ತ್ರಾಸ್ತ್ರಗಳನ್ನು ಗುಂಪು ಲೂಟಿ ಮಾಡಿದೆ ಎನ್ನುವುದನ್ನು ತಕ್ಷಣಕ್ಕೆ ಖಚಿತಪಡಿಸಲಾಗದು. ಸದ್ಯ, ತನಿಖೆ ಮುಂದುವರಿದಿದೆ' ಎಂದು ಅವರು ಹೇಳಿದ್ದಾರೆ.
ಯುವಕರ ಗುಂಪು, ಪೊಲೀಸ್ ಠಾಣೆಯಿಂದ ಎಕೆ-47 ಮತ್ತು ಐಎನ್‌ಎಸ್‌ಎಎಸ್ (ಇನ್ಸಾಸ್) ರೈಫಲ್‌ಗಳನ್ನು ದೋಚಿಕೊಂಡು ಪರಾರಿಯಾಗಿದೆ ಎಂದು ಅಧಿಕೃತವಲ್ಲದ ಮೂಲಗಳು ಹೇಳಿವೆ.
ಉಖ್ರುಲ್ ಪಟ್ಟಣದಲ್ಲಿ ನಿಷೇಧಾಜ್ಞೆ: ನಾಗಾ ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ನಂತರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊಬೈಲ್, ಇಂಟರ್ನೆಟ್ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚುವರಿ ಪಡೆಗಳನ್ನು ಕೂಡ ಜಿಲ್ಲೆಗೆ ಕರೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಹಿಂಸಾಚಾರದ ನಂತರ, ಮೂವರು ತಂಗ್ಖುಲ್ ನಾಗಾ ಶಾಸಕರು ಶಾಂತಿ ಕಾಪಾಡುವಂತೆ ಮತ್ತು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.
ಕಳೆದ ವರ್ಷದ ಮೇ 3 ರಿಂದ ಜನಾಂಗೀಯ ಘರ್ಷಣೆಯಿಂದ ಹೊತ್ತಿ ಉರಿಯುತ್ತಿರುವ ಈಶಾನ್ಯ ರಾಜ್ಯದ ಇಂಫಾಲ್ ಕಣಿವೆಯಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.