ಮಂಗಳೂರು: ಯಕ್ಷಗಾನದ ಹಾಸ್ಯರಾಜ ಎಂದೇ ಖ್ಯಾತರಾದ ಅಪ್ರತಿಮ ವಾಕ್ಪಟು,ಸಜ್ಜನ ಹಾಸ್ಯದ ಮೂಲಕ ಜನಮನ ರಂಜಕ, ಹನುಮಗಿರಿ ಮೇಳದ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ(67) ಬೆಂಗಳೂರಿನಲ್ಲಿ ಅ.21ರಂದು ಮುಂಜಾನೆ ನಿಧನರಾದರು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನ ಹೊಂದಿದ್ದಾರೆ.
ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದ ಅವರು ಆರ್ ಕೆ ಭಟ್ಟರ ಮನೆಯಲ್ಲಿ ತಂಗಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತ ದೇಹ ಆರ್.ಕೆ ಭಟ್ಟರ ಮನೆಗೆ ಅಂತಿಮ ದರ್ಶನಕ್ಕೆ ಕೊಂಡೊಯ್ದು, ಬಳಿಕ ಆಂಬುಲೆನ್ಸ್ ಮೂಲಕ ಊರಿಗೆ ಸಾಗಲಿದೆ ಎಂದು ಭಾಗವತರಾದ ಗಿರೀಶ್ ರೈ ಕಕ್ಕೆಪದವು ತಿಳಿಸಿದ್ದಾರೆ.