ಮುಂಬರುವ ಇಂಡೋ-ಜಪಾನ್ ಲೂನಾರ್ ಪೋಲಾರ್ ಎಕ್ಸ್‌ಪ್ಲೊರೇಷನ್ (ಚಂದ್ರಯಾನ-5) ಮಿಷನ್‌ಗಾಗಿ ಈ ಲ್ಯಾಂಡರ್ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಶನಿವಾರ ತಿಳಿಸಿದರು.
'ರೋವರ್‌ನ ತೂಕ 350 ಕೆ.ಜಿ ಇರುತ್ತದೆ. ಅದನ್ನು ಚಂದ್ರನ ಮೇಲ್ಮೈನಲ್ಲಿ ಇಡುವ ಕೆಲಸ ಯಶಸ್ವಿಯಾಗಲು ಹೆಚ್ಚಿನ ಸಾಮರ್ಥ್ಯದ ಲ್ಯಾಂಡರ್ ಅಭಿವೃದ್ಧಿಪಡಿಸಬೇಕಾಗಿದೆ. ಅದಕ್ಕಾಗಿ ನಮಗೆ ಹೊಸ ಎಂಜಿನ್‌ಗಳು, ಪ್ರೊಪೆಲ್ಲಂಟ್ ಟ್ಯಾಂಕ್‌ಗಳು, ಸ್ಟಿರಿಯೊ ಕಂಟ್ರೋಲ್ ಮತ್ತು ಹೊಸ ಲ್ಯಾಂಡಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ. ಇದರ ಉಡಾವಣೆ 2028ರ ಸುಮಾರಿಗೆ ನಡೆಯಲಿದೆ' ಎಂದು ಮಾಹಿತಿ ನೀಡಿದರು.
ಚಂದ್ರಯಾನ-3 ರಲ್ಲಿ ಬಳಸಿದ್ದ ಪ್ರಗ್ಯಾನ್ ರೋವರ್ 25 ಕೆ.ಜಿ ತೂಕವಿತ್ತು. ಅದಕ್ಕೆ ಹೋಲಿಸಿದರೆ ಚಂದ್ರಯಾನ-5 ಯೋಜನೆಗೆ ಅಭಿವೃದ್ದಿಪಡಿಸಲಿರುವ ಲ್ಯಾಂಡರ್‌ನ ಸಾಮರ್ಥ್ಯದಲ್ಲಿ 'ಗಮನಾರ್ಹ ಸುಧಾರಣೆ' ಇರಲಿದೆ ಎಂದರು.
'ಚಂದ್ರಯಾನ-5 ಯೋಜನೆಯು ನಿಖರ ಲ್ಯಾಂಡಿಂಗ್, ಅಧಿಕ ತೂಕದ ರೋವರ್ ಅನ್ನು ಹೊತ್ತೊಯ್ಯುವ ಲ್ಯಾಂಡರ್‌ನ ಸಾಮರ್ಥ್ಯ ಪರೀಕ್ಷೆ ಸೇರಿದಂತೆ ಭವಿಷ್ಯದಲ್ಲಿ ಮಾನವನನ್ನು ಚಂದ್ರನಲ್ಲಿಗೆ ಕಳುಹಿಸಲು ಅಗತ್ಯವಿರುವ ನಿರ್ಣಾಯಕ ತಂತ್ರಜ್ಞಾನವನ್ನು ಇಸ್ರೊ ಅಭಿವೃದ್ಧಿಪಡಿಸಿದಂತೆ ಆಗಲಿದೆ' ಎಂದು ಹೇಳಿದರು.
ಭಾರತವು 2040ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದೆ.