ಕಾಸರಗೋಡು: ನೀಲೇಶ್ವರದಲ್ಲಿ ಕಳಿಯಾಟ್ಟ ಉತ್ಸವದ ವೇಳೆ ನಿನ್ನೆ ತಡರಾತ್ರಿ ಸಂಭವಿಸಿದ ಸಿಡಿಮದ್ದು ದುರಂತಕ್ಕ ಪೋಲೀಸರ ವಿಫಲತೆ ಕಾರಣ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ.
ದೇಗುಲದ ಅಧಿಕಾರಿಗಳು ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಇಂದು ಸಾವಿರಾರು ಮಂದಿ ಭಾಗವಹಿಸಬೇಕಿದ್ದ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದರು.
ಅಪಾಯವನ್ನು ಆಹ್ವಾನಿಸಲಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಕೂಡ ಹೇಳಿದ್ದಾರೆ. ಇದು ಅತ್ಯಂತ ನಿರ್ಲಕ್ಷ್ಯದ ಅಪಘಾತ. ಸಿಡಿಮದ್ದು ಸಿಡಿಸುವಾಗ ಕೆಲವು ಷರತ್ತುಗಳನ್ನು ಅನುಸರಿಸಬೇಕು. ನಿರ್ವಾಹಕರು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಸಿಡಿಮದ್ದು ಸಿಡಿಸಿದ್ದು ಯಾರು ಎಂಬ ಬಗ್ಗೆ ಗಂಭೀರ ತನಿಖೆಯಾಗಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತಹ ಪರಿಸ್ಥಿತಿ ಬರಬೇಕು. ಅಲ್ಲದೆ ವಿಸ್ತೃತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿಡಿಮದ್ದು ಸಿಡಿಸಲು ಅನುಮತಿ ಕೇಳಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ. ಸಿಡಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ದೈವಸ್ಥಾನದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.