ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಮರಾಟಿ ಸಂರಕ್ಷಣಾ ಸಮಿತಿ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ತಾಲೂಕಿನ ನೆಟ್ಟಣಿಗೆ ಗ್ರಾಮದಲ್ಲಿ ಪರಿಶಿಷ್ಟ ವರ್ಗ ಮರಾಟಿ ಸಮುದಾಯದ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಪ್ರವೇಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, 2003ರ ವರೆಗೆ ಮರಾಟಿ ಜನಸಂಖ್ಯೆ ಆಧಾರದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದ ಮೀಸಲಾತಿ ವ್ಯವಸ್ಥೆಯನ್ನು ಪುನ:ಸ್ಥಾಪಿಸಬೇಕು, ಆನ್‍ಲೈನ್ ಮೂಲಕ ಚಿಕಿತ್ಸಾ ಫಂಡಿಗಾಗಿ ಅರ್ಜಿ ಸಲ್ಲಿಕೆ ಸಂದರ್ಭ ಮರಾಟಿ ಎಂಬ ಹೆಸರು ಒಳಪಡಿಸಬೇಕು, ಎಲ್ಲಾ ಅನುದಾನಿತ ಶಾಲೆ, ಕಾಲೇಜುಗಳಲ್ಲಿ ಲಭಿಸಿರುವ ಪ.ವರ್ಗ ಮೀಸಲಾತಿಗಿರುವ ಸವಲತ್ತು ಒದಗಿಸಬೇಕು, ಪ.ವರ್ಗ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳು ಮಂಜೂರುಗೊಳಿಸುವ ಮೊತ್ತ ಪೂರ್ಣರೀತಿಯಲ್ಲಿ ವಿನಿಯೋಗಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಕೇರಳ ಮರಾಠಿ ಸಂರಕ್ಷಣಾ ಸಮಿತಿ (ಕೆಎಂಎಸ್‍ಎಸ್) ರಾಜ್ಯಾಧ್ಯಕ್ಷ ಟಿ.ಸುಬ್ರಾಯ ನಾಯ್ಕ್ ಧರಣಿ ಉದ್ಘಾಟಿಸಿದರು. ಶ್ಯಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ, ಮುಖಂಡರಾದ ರಾಧಾಕೃಷ್ಣಪೈಕ, ಬಿ. ಮಾಯಿಲ ನಾಯ್ಕ್, ಕೃಷ್ಣ ನಾಯ್ಕ್ ಪೆರ್ಲ, ರಾಮ ನಾಯ್ಕ್ ಅಡೂರು, ರಾಧಾಕೃಷ್ಣ ಮಾಸ್ಟರ್ ಹಾಗೂ ಗೋಪಾಲ ಆತ್ರ್ಯ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಸ್ವಾಗತಿಸಿದರು. ಗಂಗಾಧರ ನೀರ್ಚಾಲ್ ವಂದಿಸಿದರು.