ನವದೆಹಲಿ: ದೇಶದಾದ್ಯಂತ ಹಲವು ದಿನಗಳಿಂದ ವಿವಿಧ ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಶಂಕಿತ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
'ಆರೋಪಿಯನ್ನು ಮಹಾರಾಷ್ಟ್ರದ ನಾಗ್ಪುರದ ಗೊಂಡಿಯಾ ಮೂಲದ 35 ವರ್ಷದ ಜಗದೀಶ್ ಉಯ್ಕೆ ಎಂದು ಗುರುತಿಸಲಾಗಿದೆ.
'ಡಿಸಿಪಿ ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾ ತಂಡವು ಬಾಂಬ್ ಬೆದರಿಕೆ ಸಂದೇಶ ಬಂದಿದ್ದ ಇ-ಮೇಲ್‌ಗಳನ್ನು ಪರಿಶೀಲನೆ ನಡೆಸಿತ್ತು. ಇದರ ಬೆನ್ನಲ್ಲೇ ಆರೋಪಿ ರಾಜ್ಯದಿಂದ ಪರಾರಿಯಾಗಿರುವುದು ತಿಳಿದು ಬಂದಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಆರೋಪಿಯು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ), ಕೇಂದ್ರ ರೈಲ್ವೆ ಸಚಿವರು, ವಿಮಾನಯಾನ ಸಂಸ್ಥೆಗಳು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಡಿಸಿಎಂ ದೇವೇಂದ್ರ ಫಡಣವೀಸ್, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿರುವುದು ದೃಢಪಟ್ಟಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶಾದದ್ಯಂತ 15 ದಿನಗಳಲ್ಲಿ ಒಟ್ಟಾರೆ 410ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಹೆಚ್ಚಿನ ಬೆದರಿಕೆ ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ಬಂದಿವೆ.