ಪಾಲಕ್ಕಾಡ್: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರ ಶಾಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಪಾಲಕ್ಕಾಡ್‍ನ ಶಬರಿ ಆಶ್ರಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ.
ಶಾಲು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಭದ್ರತಾ ಅಧಿಕಾರಿಗಳು ಕೂಡಲೇ ಬೆಂಕಿ ನಂದಿಸಿದ್ದಾರೆ. ಹಾಗಾಗಿ ದೊಡ್ಡ ಅನಾಹುತ ತಪ್ಪಿದೆ. ರಾಜ್ಯಪಾಲರಿಗೆ ಯಾವುದೇ ಗಾಯಗಳಾಗದೆ ಪಾರಾಗಿರುವರು.
ಮಂಗಳವಾರ ಬೆಳಗ್ಗೆ 10.45ರ ಸುಮಾರಿಗೆ ಈ ಘಟನೆ ನಡೆದಿದೆ. ಉದ್ಘಾಟನೆಗೆ ಕಾರಿನಲ್ಲಿ ಬಂದಿಳಿದ ರಾಜ್ಯಪಾಲರು ಮೊದಲು ಆಶ್ರಮದಲ್ಲಿರುವ ಗಾಂಧಿ ಗುಡಿಗೆ ತೆರಳಿದರು. ಗಾಂಧೀಜಿ ಪಾಲಕ್ಕಾಡಿಗೆ ಬಂದಾಗಲೆಲ್ಲಾ ಭೇಟಿ ನೀಡಿ ತಂಗುತ್ತಿದ್ದ ಸ್ಥಳ ಇದು. ನಂತರ ಕೇಂದ್ರದ ಒಳಗಿದ್ದ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಕೆಳಗೆ ಬಾಗಿದ್ದಾಗ ಪಕ್ಕದಲ್ಲಿದ್ದ ದೀಪದಿಂದ ಬೆಂಕಿ ತಗುಲಿ ಕತ್ತಿನಲ್ಲಿದ್ದ ಶಾಲಿಗೆ ವ್ಯಾಪಿಸಿತು.
ತಕ್ಷಣ ಘಟನೆ ಅಕ್ಕಪಕ್ಕದಲ್ಲಿದ್ದವರ ಗಮನಕ್ಕೆ ಬಂತು. ಅವರು ರಾಜ್ಯಪಾಲರ ಕೊರಳಲ್ಲಿದ್ದ ಶಾಲನ್ನು ತಕ್ಷಣ ತೆಗೆದೆಸೆದರು. ಶಾಲಿಗೆ ಬೆಂಕಿ ಹೊತ್ತಿಕೊಂಡ ವಿಷಯ ರಾಜ್ಯಪಾಲರಿಗೆ ಅಲ್ಪ ತಡವಾಗಿ ಗಮನಕ್ಕೆ ಬಂತು. ಅವಘಡಕ್ಕೆ ಕುಪಿತರಾಗದೆ ನಂತರದ ಸಮಾರಂಭದಲ್ಲಿ ಪಾಲ್ಗೊಂಡರು.