ಬದಿಯಡ್ಕ: ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆಯ ಪ್ರಯೋಜನದ ಬಗ್ಗೆ ನಾಗರಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಯ ನೇತೃತ್ವದಲ್ಲಿ ಜನಸುರಕ್ಷಾ ಯೋಜನೆ ಮಾಹಿತಿ ಅಭಿಯಾನ ಸೋಮವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು.
ಗ್ರಾಮೀಣ ಬ್ಯಾಂಕ್ ಸ್ಥಾನೀಯ ಪ್ರಬಂಧಕಿ ಶ್ರೀಲತ ವರ್ಮ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಎಲ್‍ಡಿಎಮ್ ತಿಪ್ಪೇಶ್ ಎಲ್. ಜನರನ್ನುದ್ದೇಶಿಸಿ ಮಾತನಾಡಿ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆಯ ಬಗ್ಗೆ ಅರಿವನ್ನು ಪಡೆದು ಯೋಜನೆಯ ಸದಸ್ಯರಾಗಬೇಕು. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಪಡೆದುಕೊಂಡು ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅತಿಸಣ್ಣ ಮೊತ್ತದಲ್ಲಿ ಲಭಿಸುವ ಈ ಆರ್ಥಿಕ ಸಹಾಯವು ಜನಸಾಮಾನ್ಯರಿಗೆ ಕಷ್ಟಕಾಲದಲ್ಲಿ ನೆರವಾಗಲಿದೆ ಎಂದರು.
ನಬಾರ್ಡ್ ಡಿಡಿಎಂ ಶಾರೋಣ್‍ವಾಸ್ ಮಾತನಾಡಿ ವಿಮೆ ಪಡೆದುಕೊಳ್ಳುವುದರಿಂದ ಏನು ಪ್ರಯೋಜನ ಎಂಬುದನ್ನು ವಿವರಿಸಿದರು. ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್ ಪಾಲ್ಗೊಂಡು ಜನಸುರಕ್ಷಾ ಯೋಜನೆಯ ಪ್ರಯೋಜನಗಳನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆಯಿತ್ತರು. ಮಂಜೇಶ್ವರ ಬ್ಲಾಕ್ ಎಫ್‍ಎಲ್‍ಸಿ ಸುಬ್ರಹ್ಮಣ್ಯ ಶೆಣೈ ಸ್ವಾಗತಿಸಿ, ಬದಿಯಡ್ಕ ಶಾಖಾ ಪ್ರಬಂಧಕ ಈಶ್ವರ ಕೆ. ವಂದಿಸಿದರು.
ಜನಸುರಕ್ಷಾ ಯೋಜನೆಯ ಮಾಹಿತಿ :
ಬ್ಯಾಂಕಿಂಗ್ ಮಾಹಿತಿ ತಜ್ಞ ದೇವದಾಸ್ ಬಿ. ಅವರು ಯೋಜನೆಯ ಕುರಿತು ಸವಿಸ್ತಾರ ಮಾಹಿತಿಯನ್ನು ಸಭೆಗೆ ತಿಳಿಸಿದರು. ವರ್ಷಕ್ಕೆ ಕೇವಲ 20 ರೂಪಾಯಿಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆಗೆ ಸೇರಬಹುದಾಗಿದೆ. 18ರಿಂದ 70 ವರ್ಷ ಪ್ರಾಯದ ಜನರು ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಅಪಘಾತದಲ್ಲಿ ಮರಣಹೊಂದಿದರೆ ವಾರಿಸುದಾರರಿಗೆ 2 ಲಕ್ಷರೂಪಾಯಿ ಲಭಿಸಲಿದೆ. ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯ ಹೊಂದಿದವರಿಗೂ ಒಂದರಿಂದ ಎರಡು ಲಕ್ಷದ ತನಕ ಸಹಾಯಧನ ಲಭಿಸಲಿದೆ. ಜೊತೆಗೆ ಪ್ರಧಾನಮಂತ್ರಿ ಜೀವನ್‍ಜ್ಯೋತಿ ಯೋಜನೆಯಲ್ಲಿ ಸೇರಲು 436ರೂಪಾಯಿಯನ್ನು ವರ್ಷಕ್ಕೆ ಪಾವತಿಸಬೇಕಾಗಿದೆ. 18ರಿಂದ 50 ವರ್ಷದ ವರೆಗೆ ಯಾವುದೇ ರೀತಿಯಲ್ಲಿ ಮರಣಹೊಂದಿದವವರ ವಾರೀಸುದಾರರಿಗೆ 2 ಲಕ್ಷರೂಪಾಯಿ ಲಭಿಸಲಿದೆ ಎಂದು ತಿಳಿಸಿದ ಅವರು ಅಟಲ್ ಪೆನ್ಶನ್ ಯೋಜನೆಯಲ್ಲಿ ಸೇರಿದ 18ರಿಂದ 40 ವರ್ಷದ ವರೆಗಿನ ಜನರಿಗೆ ಅವರ ಪ್ರಾಯಕ್ಕೆ ಹೊಂದಿಕೊಂಡು ಪ್ರೀಮಿಯಂ ನಿಗಪಡಿಸಿ ಮೊತ್ತವನ್ನು ಪಾವತಿಸಬೇಕಾಗಿದೆ. ತಾವು ಪಾವತಿಸಿದ ಮೊತ್ತಕ್ಕನುಗುಣವಾಗಿ 60 ವರ್ಷದ ನಂತರ ಪೆನ್ಶನ್ ಲಭಿಸಲಿದೆ ಎಂದರು. ಕಿರು ನಾಟಕವನ್ನು ಪ್ರಸ್ತುತಪಡಿಸುವ ಮೂಲಕ ಯೋಜನೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು.
ಅಭಿಮತ:1) ಕೇಂದ್ರ ಸರ್ಕಾರ ಜನರ ಸುರಕ್ಷತೆಗೆ ಹಾಗೂ ಆರ್ಥಿಕ ಭದ್ರತೆಗಾಗಿ ಅತಿಸುಲಭವಾದ ಯೋಜನೆಗಳನ್ನು ಜನಸಾಮಾನ್ಯರಿಗೆ ನೀಡಿದೆ. 18 ವಷರ್Àಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
- ದೇವದಾಸ್ ಬಿ., ಬ್ಯಾಂಕಿಂಗ್ ಮಾಹಿತಿ ತಜ್ಞ
ಅಭಿಮತ:2)
ಯಾವುದೇ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿದವರಿಗೆ ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದುದರಿಂದ ಜನರು ತಮ್ಮ ಕುಟುಂಬದ ಹಿತದೃಷ್ಟಿಯನ್ನಿಟ್ಟುಕೊಂಡು ಯೋಜನೆಗೆ ಸೇರಿಕೊಳ್ಳಬೇಕು. ತಮ್ಮ ಬ್ಯಾಂಕ್‍ನ್ನು ಸಂಪರ್ಕಿಸಿ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಕೂಡಲೇ ಈ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಾವು ಸೇರುವುದರೊಂದಿಗೆ ಮಾಹಿತಿಯಿಲ್ಲದ ತಮ್ಮ ಆಪ್ತರನ್ನು, ಸಮೀಪವಾಸಿಗಳಿಗೆ ಯೋಜನೆಯ ಅವಕಾಶಗಳನ್ನು ತಿಳಿಸಬೇಕು.
- ಈಶ್ವರ ಕೆ., ಪ್ರಬಂಧಕ, ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆ.