HEALTH TIPS

ವಯನಾಡ್‌ ಭೂಕುಸಿತ | ಕೇಂದ್ರದಿಂದ ಇದುವರೆಗೂ ವಿಶೇಷ ನೆರವು ಸಿಕ್ಕಿಲ್ಲ; ವಿಜಯನ್

        ತಿರುವನಂತಪುರ: 'ವಯನಾಡ್‌ ಭೂಕುಸಿತ ಗ್ರಾಮಗಳ ಪುನರ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇದುವರೆಗೂ ನಿರ್ದಿಷ್ಟ ಹಾಗೂ ವಿಶೇಷ ಅನುದಾನವನ್ನು ನೀಡಿಲ್ಲ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ಇಲ್ಲಿ ಆರೋಪಿಸಿದರು.

        ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ 200 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಪುನರ್‌ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರವು ನೆರವು ಹಾಗೂ ವಿಶೇಷ ಅನುದಾನ ನೀಡುವುದಾಗಿ ವಾಗ್ದಾನ ನೀಡಿತ್ತು. ಇದುವರೆಗೂ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ರಾಜ್ಯ ಸರ್ಕಾರವು ತುರ್ತಾಗಿ ₹219.2 ಕೋಟಿ ಹಾಗೂ ಎಸ್‌ಡಿಆರ್‌ಎಫ್‌ನ ಕೇಂದ್ರದ ಪಾಲು ಹೆಚ್ಚುವರಿಯಾಗಿ ನೀಡುವಂತೆ ಮನವಿ ಮಾಡಿತ್ತು. ಆದರೆ ಯಾವುದೇ ನೆರವು ಸಿಕ್ಕಿಲ್ಲ' ಎಂದು ದೂರಿದರು.

            'ಅಕ್ಟೋಬರ್‌ 1ರಂದು ಪಿಐಬಿ ಮೂಲಕ ಪತ್ರಿಕಾ ಪ್ರಕಟಣೆ ನೀಡಿದ್ದ ಕೇಂದ್ರ ಸರ್ಕಾರ, ಎಸ್‌ಡಿಆರ್‌ಎಫ್‌ನ ಕೇಂದ್ರ ಪಾಲಿನ ₹291.1 ಕೋಟಿ ಪೈಕಿ ಮೊದಲ ಕಂತಿನಲ್ಲಿ ₹145.6 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದೆ. ಆದರೆ, ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಯಾವುದೇ ವಿಶೇಷ ಅನುದಾನ ನೀಡಿಲ್ಲ' ಎಂದು ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದರು.

            'ವಯನಾಡ್‌ ದುರಂತದ ಬಳಿಕ ವಿಶೇಷ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರವೇ ವಾಗ್ದಾನ ನೀಡಿತ್ತು. ಆದರೆ, ಇದುವರೆಗೂ ಈ ಅನುದಾನ ಬಂದಿಲ್ಲ ಆದಷ್ಟು ಶೀಘ್ರ ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರ್ಕಾರದ ಗಮನಸೆಳೆಯಲಾಗುವುದು' ಎಂದು ತಿಳಿಸಿದರು.

'ಭೂಕುಸಿತದಲ್ಲಿ ಹೆತ್ತವರನ್ನು ಕಳೆದುಕೊಂಡ ಆರು ಮಕ್ಕಳಿಗೆ ತಲಾ ₹10 ಲಕ್ಷ, ಒಬ್ಬರನ್ನು ಕಳೆದುಕೊಂಡ ಮಕ್ಕಳಿಗೆ ತಲಾ ₹5ಲಕ್ಷ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಮುಖಾಂತರ ಈ ಹಣ ನೀಡಲಾಗುವುದು' ಎಂದರು.

        ಮಾದರಿ ಟೌನ್‌ಶಿಪ್‌ ನಿರ್ಮಾಣ: 'ಮೆಪ್ಪಾಡಿ ಗ್ರಾಮ ಪಂಚಾಯತ್‌ನ ನೆಡುಂಬಲ ಎಸ್ಟೇಟ್‌, ಕಲ್ಪೆಟ್ಟ ಮುನ್ಸಿಪಾಲಿಟಿಯ ಎಲ್‌ಸ್ಟೋನ್‌ ಎಸ್ಟೇಟ್‌ನಲ್ಲಿ ಮಾದರಿ ಟೌನ್‌ ಶಿಪ್‌ ನಿರ್ಮಾಣ ಮಾಡಿ, ಮನೆ ಕಳೆದುಕೊಂಡವರಿಗೆ ಪುನರ್‌ವಸತಿ ಕಲ್ಪಿಸಲಾಗುವುದು. ಭೂಮಿ ವಶಕ್ಕೆ ಪಡೆಯಲು ಕಾನೂನು ತೊಡಕು ಎದುರಾಗಿದ್ದು, ತಜ್ಞರ ಜತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು' ಎಂದು ತಿಳಿಸಿದರು.

ಅರ್ಜುನ್‌ ಕುಟುಂಬಕ್ಕೆ ₹7 ಲಕ್ಷ ನೆರವು

              'ಕಾರವಾರ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮೃತಪಟ್ಟ ಕೇರಳದ ಕೋಯಿಕ್ಕೋಡ್‌ ಮೂಲದ ಲಾರಿ ಚಾಲಕ ಅರ್ಜುನ್‌ ಅವರ ಕುಟುಂಬಕ್ಕೆ ₹7 ಲಕ್ಷ ಹಾಗೂ ವಯನಾಡ್‌ ದುರಂತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡಿದ್ದ ಶ್ರುತಿಗೆ ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟ ನಿರ್ಧರಿಸಿದೆ' ಎಂದು ಪಿಣರಾಯಿ ವಿಜಯನ್‌ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries