ಮುಂಬೈ: ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಅಗಲಿ 15 ದಿನಗಳು ಕಳೆದಿವೆ. ಇದೀಗ ಅವರ ಕೊನೆಯ ಆಸೆಯಾಗಿ ಬರೆದಿಟ್ಟ ಉಯಿಲಿನಲ್ಲಿ ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಕೈಗಾರಿಕೋದ್ಯಮಿ, ತಮ್ಮ ದೂರದೃಷ್ಟಿ ಹಾಗೂ ನೈತಿಕವಾಗಿ ಉನ್ನತ ಮಟ್ಟದ ನಾಯಕತ್ವ ಹೊಂದಿದ್ದ ರತನ್ ಟಾಟಾ ಅವರು 150 ವರ್ಷಗಳ ಟಾಟಾ ಸಮೂಹಕ್ಕೆ ಹೊಸ ದಿಕ್ಕನ್ನು ತೋರಿಸಿದವರು. ವ್ಯವಹಾರದಲ್ಲಿ ಕಠಿಣವಾಗಿದ್ದರೂ, ಸ್ವಭಾವತಃ ಅಂತಃಕರಣ ವ್ಯಕ್ತಿತ್ವ ಉಳ್ಳವರು. ಸುಮಾರು ₹10 ಸಾವಿರ ಕೋಟಿ ಆಸ್ತಿ ಹೊಂದಿದ್ದ ಅವರು, ತಮ್ಮೊಂದಿಗೆ ಕೊನೆಗಾಲದಲ್ಲಿ ಇದ್ದ, ಹಾಗೂ ಬದುಕಿದ್ದ ಅವಧಿಯಲ್ಲಿ ಸ್ನೇಹ ಸಂಪಾದಿಸಿದವರಿಗೂ ರತನ್ ಪಾಲು ಇಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರತನ್ ಅವರ ಒಟ್ಟು ಆಸ್ತಿಯಲ್ಲಿ ಸೋದರಿಯರಾದ ಶಿರೀನ್ ಹಾಗೂ ಡಿಯೆನ್ನಾ ಜೀಜಾಬಾಯಿ ಅವರಿಗೆ ಅರ್ಧದಷ್ಟು ಆಸ್ತಿಯನ್ನು ವರ್ಗಾಯಿಸಲು ತಿಳಿಸಿದ್ದಾರೆ. ತಮ್ಮ ಒಟ್ಟು ಆಸ್ತಿಯಲ್ಲಿ ಅಲಿಬಾಗ್‌ನಲ್ಲಿರುವ 2 ಸಾವಿರ ಚದರಡಿಯ ಬೀಚ್ ಬಂಗಲೆ, ಜುಹುನ ತಾರಾ ರಸ್ತೆಯಲ್ಲಿರುವ 2 ಅಂತಸ್ತಿನ ಮನೆ, ನಿಶ್ಚಿತ ಠೇವಣಿಯಲ್ಲಿ ₹350 ಕೋಟಿ, ಟಾಟಾ ಸನ್ಸ್‌ನಲ್ಲಿ ಶೇ 0.83ರಷ್ಟು (ಟಾಟಾ ಸಮೂಹದ ಒಟ್ಟು ಆಸ್ತಿ ಮೌಲ್ಯ ₹13 ಲಕ್ಷ ಕೋಟಿ) ಪಾಲು ರತನ್ ಅವರ ಬಳಿ ಇತ್ತು.
ತಮ್ಮ ಉಯಿಲಿನಲ್ಲಿ ರತನ್ ಟಾಟಾ ಅವರು ತಮ್ಮ ಮೆಚ್ಚಿನ ಜರ್ಮನ್ ಶೆಪರ್ಡ್ ತಳಿಯ ಸಾಕು ನಾಯಿ ಟಿಟೊ ಕುರಿತು ಅಪಾರ ಪ್ರೀತಿಯ ಮಾತುಗಳನ್ನು ಬರೆದಿದ್ದಾರೆ. ಆರು ವರ್ಷಗಳ ಹಿಂದೆ ತಮ್ಮನ್ನು ಸೇರಿದ ಟಿಟೊನ ಮುಂದಿನ ಆರೈಕೆಯ ಹೊಣೆಯನ್ನು ತಮ್ಮ ದೀರ್ಘಕಾಲದ ಬಾಣಸಿಗ ರಾಜನ್ ಶಾ ಅವರಿಗೆ ವಹಿಸಿದ್ದಾರೆ.
ತಮ್ಮೊಂದಿಗೆ ಸುಮಾರು ಮೂವತ್ತು ವರ್ಷಗಳ ಕಾಲ ಬಟ್ಲರ್ ಆಗಿ ಕೆಲಸ ಮಾಡುತ್ತಿದ್ದ ಸುಬ್ಬಯ್ಯ ಅವರೊಂದಿಗೆ ರತನ್ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ರಾಜನ್ ಹಾಗೂ ಸುಬ್ಬಯ್ಯ ಇಬ್ಬರೂ ಟಾಟಾ ಅವರ ಅತ್ಯಂತ ನಿಕಟವರ್ತಿಗಳಾಗಿದ್ದರು. ಈ ಇಬ್ಬರ ಹೆಸರೂ ಉಯಿಲಿನಲ್ಲಿದೆ ಎಂದೆನ್ನಲಾಗಿದೆ.
ತಮ್ಮ ಕೊನೆಗಾಲದಲ್ಲಿ ಶಾಂತನು ನಾಯ್ಡು ಅವರು ರತನ್ ಅವರ ಸ್ನೇಹ ಸಂಪಾದಿಸಿದ್ದರು. ಹೀಗಾಗಿ ತಮ್ಮ ಉಯಿಲಿನಲ್ಲಿ ಅವರ ಹೆಸರೂ ಪ್ರಸ್ತಾಪವಾಗಿದೆ. ಶಾಂತನು ಅವರ ಗುಡ್‌ಫೆಲೋಸ್‌ನ ಮಾಲೀಕತ್ವ ಹೊಂದುವ ತಮ್ಮ ಇರಾದೆಯಿಂದ ಟಾಟಾ ಹಿಂದೆ ಸರಿದು, ಅದನ್ನು ಸಂಪೂರ್ಣವಾಗಿ ಶಾಂತನು ಅವರಿಗೇ ಬಿಟ್ಟುಕೊಡಲಾಗಿದೆ. ಜತೆಗೆ ಅವರ ಶಿಕ್ಷಣಕ್ಕೆ ನೀಡಿದ್ದ ಸಾಲವನ್ನು ಮನ್ನಾ ಮಾಡಿದ್ದಾರೆ.
ವಾಡಿಕೆಯಂತೆ ರತನ್ ಅವರ ಪಾಲಿನ ಕಂಪನಿಯ ಷೇರುಗಳನ್ನು ರತನ್ ಟಾಟಾ ದತ್ತಿ ಪ್ರತಿಷ್ಠಾನಕ್ಕೆ ಟಾಟಾ ಸನ್ಸ್ ವರ್ಗಾಯಿಸಿದೆ. ಆದರೆ ತಮ್ಮ ಉಯಿಲಿನಲ್ಲಿ ಸೋದರರ ಹೆಸರನ್ನು ರತನ್ ಬರೆದಿಲ್ಲ ಎಂದು ವರದಿಯಾಗಿದೆ.
86 ವರ್ಷದ ರತನ್ ಟಾಟಾ ಅವರು ಅ. 9ರಂದು ಕೊನೆಯುಸಿರೆಳೆದರು.