ತಿರುವನಂತಪುರ: ವಿವಾದಿತ ಗಣಿಗಾರಿಕೆ ಕಂಪನಿಯೊಂದರಿಂದ ಭಾರಿ ಪ್ರಮಾಣದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರನ್ನು ಗಂಭೀರ ಅಪರಾಧಗಳ ತನಿಖಾ ಕಚೇರಿಯ (ಎಸ್‌ಎಫ್‌ಐಒ) ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಎಸ್‌ಎಫ್‌ಐಒ ಕೆಲಸ ಮಾಡುತ್ತದೆ. ಎಸ್‌ಎಫ್‌ಐಒ ಅಧಿಕಾರಿಗಳು ವೀಣಾ ಅವರನ್ನು ಚೆನ್ನೈನಲ್ಲಿ ಇರುವ ತಮ್ಮ ಕಚೇರಿಗೆ ಕಳೆದ ವಾರ ಕರೆಸಿದ್ದರು, ಕೊಚ್ಚಿ ಮೂಲದ ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ಸ್ ಲಿಮಿಟೆಡ್ ಕಂಪನಿಯಿಂದ ಪಡೆದ ₹1.72 ಕೋಟಿ ಬಗ್ಗೆ ಪ್ರಶ್ನಿಸಿದರು ಎನ್ನಲಾಗಿದೆ. ಕೇರಳದಲ್ಲಿ ಖನಿಜಯುಕ್ತ ಮರಳು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸಿದ ಆರೋಪವು ಈ ಕಂಪನಿಯ ಮೇಲಿದೆ.
ಪುತ್ರಿ ವೀಣಾ ಅವರು ಬೆಂಗಳೂರಿನಲ್ಲಿ ಹೊಂದಿರುವ ಎಕ್ಸಾಲಾಜಿಕ್ ಸಲ್ಯೂಷನ್ಸ್ ಕಂಪನಿಯು ಈ ಗಣಿಗಾರಿಕೆ ಕಂಪನಿಗೆ ನೀಡಿದ ಸೇವೆಗಳಿಗೆ ಪ್ರತಿಯಾಗಿ ಈ ಮೊತ್ತವನ್ನು ಸ್ವೀಕರಿಸಲಾಗಿದೆ ಎಂದು ವಿಜಯನ್ ಅವರು ಈ ಹಿಂದೆ ಸಮರ್ಥಿಸಿಕೊಂಡಿದ್ದರು. ಆದರೆ, ಗಣಿಗಾರಿಕೆ ಕಂಪನಿ ನೀಡಿರುವ ಮೊತ್ತವು ಅಕ್ರಮ ಮರಳು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಲಂಚ ನೀಡದೆ ಎಂದು ಕಾಂಗ್ರೆಸ್ ಆರೋಪಿಸಿದೆ.