ಮುಂಬೈ: ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮೂವರು ಹಂತಕರು, ರಾಯಗಢ ಜಿಲ್ಲೆಯಲ್ಲಿರುವ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುಂಬೈ: ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮೂವರು ಹಂತಕರು, ರಾಯಗಢ ಜಿಲ್ಲೆಯಲ್ಲಿರುವ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಿದ್ದೀಕಿ ಅವರನ್ನು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಅಕ್ಟೋಬರ್ 12ರಂದು ಹತ್ಯೆ ಮಾಡಲಾಗಿದೆ. ಸಿದ್ದೀಕಿ ಅವರು ತಮ್ಮ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಜೀಶನ್ ಅವರ ಕಚೇರಿಯಿಂದ ಹೊರಗೆ ಬಂದಾಗ ಗುಂಡಿನ ದಾಳಿ ನಡೆಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಅಪರಾಧ ದಳ ಚುರುಕುಗೊಳಿಸಿದೆ.
ದಾಳಿ ನಡೆಸಿದ್ದವರಲ್ಲಿ ಧರ್ಮರಾಜ್ ಕಶ್ಯಪ್, ಗುರ್ಮೈಲ್ ಸಿಂಗ್ ಎಂಬ ಇಬ್ಬರನ್ನು ಕೂಡಲೇ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಶಿವಕುಮಾರ್ ಗೌತಮ್ ತಲೆಮರೆಸಿಕೊಂಡಿದ್ದಾನೆ. ಈ ಮೂವರೂ ಮುಂಬೈ ಹೊರವಲಯದ ಕರ್ಜತ್ ತಾಲ್ಲೂಕಿನ ಪಾಲಸ್ದರಿ ಸಮೀಪದಲ್ಲಿರುವ ಜಲಪಾತದ ಹತ್ತಿರ ಸೆಪ್ಟೆಂಬರ್‌ನಲ್ಲಿ ಅಭ್ಯಾಸ ನಡೆಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ನಿರ್ಜನ ಪ್ರದೇಶವಾದ ಕಾರಣ, ಆ ಜಾಗವನ್ನು ಅಭ್ಯಾಸಕ್ಕೆ ಆಯ್ಕೆ ಮಾಡಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನೂ ಬಂಧಿಸಲಾಗಿದೆ. ಸಿದ್ದೀಕಿ ಅವರ ಹತ್ಯೆಯ ಸುಪಾರಿಯನ್ನು ಆರಂಭದಲ್ಲಿ ನಿತಿನ್ ಸಪ್ರೆ ಹಾಗೂ ರಾಮ್ ಕನೌಜಿಯಾ ನೇತೃತ್ವದ ಥಾಣೆ ಮೂಲದ ಐವರ ತಂಡ ಪಡೆದುಕೊಂಡಿತ್ತು. ಅಪರಾಧಕ್ಕೆ ಬಳಸಿದ ಪಿಸ್ತೂಲ್‌ಗಳನ್ನು ಕನೌಜಿಯಾ ಹಾಗೂ ಮತ್ತೊಬ್ಬ ಆರೋಪಿ ಭಗವಂತ್ ಸಿಂಗ್ ಓಂ ಸಿಂಗ್ ರಾಜಸ್ಥಾನದಿಂದ ತಂದಿದ್ದರು. ಆದರೆ, ಕೃತ್ಯವೆಸಗಲು ಇರಿಸಿದ್ದ ₹ 50 ಲಕ್ಷ ಬೇಡಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಈ ಗುಂಪು ಹಿಂದೆ ಸರಿದಿತ್ತು. ಆದಾಗ್ಯೂ, ಸಿದ್ದೀಕಿ ಹತ್ಯೆಯಾಗುವ ವರೆಗೆ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳು ಸೇರಿದಂತೆ ಇತರ ನೆರವು ನೀಡುವುದನ್ನು ಮುಂದುವರಿಸಿತ್ತು ಎಂಬುದೂ ಗೊತ್ತಾಗಿದೆ.