ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನ ಸರ್ಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟವು ಹಕ್ಕು ಪತ್ರವನ್ನು ಮಂಡಿಸಿದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿರುವ ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
'ನಾನು ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಿ ಎನ್‌ಸಿ, ಕಾಂಗ್ರೆಸ್, ಸಿಪಿಐ(ಎಂ), ಎಎಪಿ ಹಾಗೂ ಪಕ್ಷೇತರರು ಬೆಂಬಲಿಸುವ ಪತ್ರವನ್ನು ಹಸ್ತಾಂತರಿಸಿದ್ದೇನೆ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ಆದಷ್ಟು ಬೇಗನೇ ಪ್ರಮಾಣವಚನ ನಿಗದಿಪಡಿಸುವಂತೆ ವಿನಂತಿ ಮಾಡಿದ್ದೇನೆ' ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಪ್ರಮಾಣ ವಚನ ಸಮಾರಂಭ ಬುಧವಾರ ನಡೆಯುವ ಸಾಧ್ಯತೆಯಿದೆ.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ)-ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರಳ ಬಹುಮತ ಪಡೆದಿದೆ. ಎನ್‌ಸಿ 42, ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಗೆಲುವು ಗಳಿಸಿತ್ತು. ಎಎಪಿ ಒಂದು ಮತ್ತು ನಾಲ್ವರು ಪಕ್ಷೇತರರ ಬೆಂಬಲವಿದೆ.
ಈ ಹಿಂದೆ ಎನ್‌ಸಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 2009ರಿಂದ 2014ರ ಅವಧಿಯಲ್ಲಿ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದರು.