ನವದೆಹಲಿ: 'ಧರ್ಮಬೋಧನೆ ಎಂದಿಗೂ ದೇಶಕ್ಕೆ ಹೊರತಾದುದಲ್ಲ ಮತ್ತು ಇದು, ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಹಿಂದೂ, ಸಿಖ್, ಕ್ರೈಸ್ತ ಎಲ್ಲ ಧರ್ಮೀಯರಲ್ಲೂ ಇದೆ. ದೇಶದಲ್ಲಿ ಸಂಸ್ಕೃತಿ, ಧರ್ಮ ಹಾಗೂ ನಾಗರಿಕತೆಗಳು ಸಮ್ಮಿಳಿತವಾಗಬೇಕು' ಎಂದು ಸುಪ್ರಿಂ ಕೋರ್ಟ್ ಹೇಳಿದೆ.
'ಕೇರೀಕರಣಗೊಳ್ಳುವ (ಘೆಟ್ಟೊ-ಅಲ್ಪಸಂಖ್ಯಾತರ ಪ್ರದೇಶ) ಪ್ರಕ್ರಿಯೆಗೆ ಉತ್ತರವೆಂದರೆ ಆ ಜನರನ್ನು ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳುವುದು ಮತ್ತು ಅವರು ಒಟ್ಟಿಗೆ ಬರಲು ಅವಕಾಶ ಮಾಡಿಕೊಡುವುದು ಎಂಬುದೇ ಆಗಿದೆ. ಆದರೆ, ಈಗ ಏನಾಗುತ್ತಿದೆ. ಜನರನ್ನು ಒಂದು ಚೌಕಟ್ಟಿಗೇ ಸೀಮಿತಗೊಳಿಸುತ್ತಿದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಉತ್ತರ ಪ್ರದೇಶದ ಮದರಸಾ ಕಾಯ್ದೆ-2004 ಅಸಾಂವಿಧಾನಿಕ ಎಂದು ಹೇಳಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ಅಂಜುಂ ಖಾದ್ರಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಕಾಯ್ದೆ ಅಸಾಂವಿಧಾನಿಕ, ಜಾತ್ಯತೀತ ತತ್ವಗಳಿಗೆ ವಿರುದ್ಧ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ತೀರ್ಪನ್ನು ಕಾಯ್ದಿರಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ, ಮನೋಜ್ ಮಿಶ್ರಾ ಪೀಠದ ಇತರ ಸದಸ್ಯರಾಗಿದ್ದಾರೆ.
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, 'ಹೈಕೋರ್ಟ್ ಇಡೀ ಕಾಯ್ದೆ ರದ್ದುಪಡಿಸುವ ಬದಲಿಗೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಎನ್ನಲಾದ ಅಂಶವನ್ನು ರದ್ದುಪಡಿಸಬಹುದಿತ್ತು' ಎಂದರು.
ವಿಚಾರಣೆಯ ಒಂದು ಹಂತದಲ್ಲಿ, 'ಮದರಸಾದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಕಾಯ್ದೆಯ ಪರಿಧಿಯಿಂದ ಮದರಸಾವನ್ನು ಹೊರಗಿಡುವುದು ಎಂದರೆ, 'ಸ್ನಾನ ಮಾಡಿಸುತ್ತಿದ್ದ ಶಿಶುವನ್ನು ಎಸೆದಂತೆ' ಎಂದು ಪೀಠವು ಅಭಿಪ್ರಾಯಪಟ್ಟಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, 'ಹೈಕೋರ್ಟ್ ತೀರ್ಪಿನಿಂದಾಗಿ ಹಲವು ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ. ನೂರಾರು ಮಕ್ಕಳನ್ನು ಈಗ ಬಲವಂತವಾಗಿ ಹೊರಗೆ ಕಳುಹಿಸುವುದು ಜಾತ್ಯತೀತತೆ ಅಲ್ಲ' ಎಂದರು. ಇದಕ್ಕೆ ಪೀಠವು 'ಜಾತ್ಯತೀತತೆ ಎಂದರೆ ಬದುಕುವುದು, ಬದುಕಲು ಬಿಡುವುದು' ಎಂದರು.
ಇಡೀ ಕಾಯ್ದೆಯನ್ನು ರದ್ದುಪಡಿಸುವುದು ಎಂದರೆ ಅದರರ್ಥ, ಮದರಸಾಗಳು ನಿಯಂತ್ರಣ ಇಲ್ಲದೆಯೇ ಮುಂದುವರಿಯುತ್ತವೆ ಎಂಬುದೇ ಆಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಮದರಸಾಗಳು ಮುಖ್ಯವಾಹಿನಿಗೆ ಬರಲು ನೆರವಾಗುತ್ತಿಲ್ಲ ಎಂಬ ವಾದಕ್ಕೆ ಪ್ರತಿಯಾಗಿ, ಧಾರ್ಮಿಕ ಸಂಸ್ಥೆಗಳು ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಬೌದ್ಧ ಬಿಕ್ಕುಗಳಿಗೆ ತರಬೇತಿ ನೀಡುವ ಸಂಸ್ಥೆಗಳಿವೆ. ಇಸ್ಲಾಂ ಅನ್ನು ಕೇಂದ್ರೀಕರಿಸಿ ಮಾಡುತ್ತಿರುವ ವಾದವು, ಭಾರತದಲ್ಲಿ ಎಲ್ಲ ಧರ್ಮಗಳಿಗೂ ಅನ್ವಯವಾಗುತ್ತದೆ. ಅಂದರೆ ವೇದ ಪಾಠಶಾಲಾಗಳಿಂದ, ಬೌದ್ಧ ಬಿಕ್ಕುಗಳು, ಜೈನ ಅರ್ಚಕರ ತರಬೇತಿ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ಪೀಠವು ಹೇಳಿತು.