ಬಾಯಿಯ ದುರ್ವಾಸನೆ ಎಂಬುದು ಬಹಳ ಮುಜುಗರದ ವಿಚಾರವೇ ಹೌದು. ಬಾಯಿಯ ಸ್ವಚ್ಛತೆ ಪ್ರತಿಯೊಬ್ಬನೂ ಅತ್ಯಂತ ಹೆಚ್ಚು ಕಾಳಜಿ ವಹಿಸಬೇಕಾದುದು ಹೌದಾದರೂ, ಇತರರ ಮೇಲೂ ಪರಿಣಾಮ ಬೀರುವ ಅಂಶವೂ ಇದರಲ್ಲಿರುವುದು ನಿಜವೇ. ಮೊದಲ ಭೇಟಿ, ಪ್ರೀತಿಪಾತ್ರರ ಜೊತೆ ಮಾತು- ಕಥೆ- ನಗು- ತಮಾಷೆ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಬೆರೆಯುವುದು, ಪಕ್ಕದಲ್ಲಿ ಹಾದುಹೋದ ಯಾರೋ ಅಪರಿಚಿತ ಹೀಗೆ ಯಾರೊಂದಿಗೆ ಮುಖಾಮುಖಿಯಾಗಿ ಮಾತು ವಿನಿಮಯವಾದರೂ ಅಲ್ಲೊಂದು ಹೇಳಿಕೊಳ್ಳಲಾಗದ ಇರುಸು ಮುರುಸು ಕೂಡಾ ಉದ್ಭವಿಸುತ್ತದೆ.
ಎದುರಿಗಿರುವ ವ್ಯಕ್ತಿ ಎಷ್ಟೇ ಆಪ್ತನಾಗಿರಲಿ, ಬಾಯಿಯಿಂದ ದುರ್ವಾಸನೆ ಬೀರುತ್ತಾ ಮುಖದ ಸಮೀಪ ಬಂದು ಮಾತಾಡಿದರೆ, ಆಗುವ ಹಿಂಸೆ ಅಷ್ಟಿಷ್ಟಲ್ಲ. ಹಾಗಾಗಿ ಪ್ರತಿಯೊಬ್ಬರೂ, ತಮ್ಮ ತಮ್ಮ ಬಾಯಿಯ ಸ್ವಚ್ಛತೆಯ ಬಗ್ಗೆ ನಿತ್ಯ ಆದ್ಯತೆ ನೀಡಬೇಕು. ಬೆಳಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜಿವುದನ್ನು ರೂಢಿಸಿಕೊಂಡರಷ್ಟೇ ಸಾಲದು, ಬಹಳ ಸಾರಿ ಗೊತ್ತೇ ಆಗದ ಕೆಲವು ಅಂಶಗಳು ಈ ಬಾಯಿವಾಸನೆಗೆ ಕಾರಣವಾಗಿರುತ್ತದೆ. ಹಾಗಾಗಿ, ಸ್ವಚ್ಛತೆಯನ್ನು ಆದ್ಯತೆಯಾಗಿಟ್ಟುಕೊಂಡು, ಸುಲಭವಾಗಿ ಸಾಧ್ಯವಿರುವ ಈ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಬಾಯಿ ವಾಸನೆಯಿಂದ ದೂರವಿರಲು ನೀವು ಪ್ರಯತ್ನಿಸಬಹುದು.
ಅಲ್ಲದೇ ಹಲ್ಲು ಸ್ವಚ್ಛವಾಗಿರಲು, ಬಾಯಿ ದುರ್ವಾಸನೆಯನ್ನು ತಡೆಯಲು ಪ್ರತಿದಿನ ಬ್ರಷ್ ಮಾಡುತ್ತೇವೆ. ಕೆಲವರು ಬೆಳಗ್ಗೆ ಹಾಗೂ ಸಂಜೆ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುತ್ತಾರೆ. ಇಷ್ಟಾದರೂ ಅನೇಕ ಮಂದಿ ಬಾಯಿ ದುರ್ವಾಸನೆ ಸಮಸ್ಯೆ ಹೊಂದಿರುತ್ತಾರೆ. ಆದರೆ ಇದಕ್ಕೆ ಬೇರೆ ಕಾರಣಗಳು ಕೂಡಾ ಇವೆ.
ಆದ್ರೆ ನಾವು ಇಲ್ಲಿ ಹೇಳುವ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.
- ಕಡಿಮೆ ನೀರು ಕುಡಿಯುವವರಲ್ಲಿ ಬಾಯಿ ದುರ್ವಾಸನೆ ಸಮಸ್ಯೆ ಹೆಚ್ಚು ಎನ್ನುತ್ತಾರೆ ಆರೋಗ್ಯ ತಜ್ಞರು. ಹೆಚ್ಚು ನೀರು ಕುಡಿದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಹೊರ ಬರುತ್ತದೆ. ಬಾಯಿಯನ್ನು ತಾಜಾವಾಗಿರಿಸುತ್ತದೆ. ಬಾಯಿಯಿಂದ ಕೆಟ್ಟ ವಾಸನೆ ಬಂದರೆ ತಕ್ಷಣ ನೀರು ಕುಡಿಯಿರಿ. ಸಾಧ್ಯವಾದರೆ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದು ಇನ್ನೂ ಉತ್ತಮ.
- ಊಟವಾದ 30 ನಿಮಿಷಗಳ ನಂತರ ಗ್ರೀನ್ ಟೀ ಕುಡಿಯಿರಿ. ಇದರ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತವೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
- ಊಟ ಮಾಡಿದ ನಂತರ ಒಂದು ಅಥವಾ ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಸ್ವಲ್ಪ ಹೊತ್ತು ಜಗಿಯಬೇಕು. ಇದರಿಂದ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಬಹುದು. ಲವಂಗದಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಕೂಡಾ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ ಮತ್ತು ಬಾಯಿಯ ದುರ್ವಾಸನೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
- ಮೊಸರಿನಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿದೆ. ಇದು ಬಾಯಿ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಊಟದ ನಂತರ ಮೊಸರು ತಿನ್ನುವುದನ್ನು ರೂಢಿ ಮಾಡಿಕೊಂಡರೆ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆ ಬರುವುದಿಲ್ಲ.
- ಕ್ಯಾಪ್ಸಿಕಂ ಮತ್ತು ಬ್ರೊಕೊಲಿಯನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸಿ. ಇವುಗಳಲ್ಲಿರುವ ವಿಟಮಿನ್ ಸಿ ರೋಗಾಣುಗಳನ್ನು ಕೊಲ್ಲುತ್ತದೆ. ಹಾಗೂ ದುರ್ವಾಸನೆ ತಡೆಯುತ್ತದೆ.
- ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ಕಿತ್ತಳೆ, ಕಿವಿ, ಸ್ಟ್ರಾಬೆರಿ, ಅನಾನಸ್ ಮುಂತಾದ ಹಣ್ಣುಗಳನ್ನು ತಿಂದರೆ ಬಾಯಿ ದುರ್ವಾಸನೆ ಬರುವುದಿಲ್ಲ. ಜೊತೆಗೆ ಹಲ್ಲಿನ ಸಮಸ್ಯೆಗಳೂ ಮಾಯವಾಗುತ್ತವೆ. ಒಸಡುಗಳು ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆ.
- ಒಂದು ಚಮಚ ಸೋಂಪು ಕಾಳು ತಿಂದರೆ ಬಾಯಿಯ ದುರ್ವಾಸನೆ ಕಡಿಮೆಯಾಗಿ ಬಾಯಿ ಫ್ರೆಶ್ ಆಗುತ್ತದೆ. ಊಟದ ನಂತರ ಒಂದು ಅಥವಾ ಎರಡು ತಾಜಾ ಪುದೀನಾ ಅಥವಾ ತುಳಸಿ ಎಲೆಗಳನ್ನು ಅಗಿಯಿರಿ. ಇದರಿಂದ ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
- ಪ್ರತಿ ಬಾರಿ ಊಟ ಮಾಡಿದ ನಂತರ ಅಥವಾ ಏನಾದರೂ ಸೇವಿಸಿದ ನಂತರ ಒಂದೆರಡು ಬಾರಿ ಬಾಯಿ ಮುಕ್ಕಳಿಸಿ. ಇದರಿಂದ ಹಲ್ಲಿನ ಸಂದುಗಳಲ್ಲಿ ಸಿಲುಕಿರುವ ಆಹಾರ ಕಣಗಳು ಹೊರಗೆ ಬಂದು ದುರ್ವಾಸನೆ ಬರುವುದನ್ನು ತಡೆಯುತ್ತದೆ.