ಕಾಸರಗೋಡು: ನವರಾತ್ರಿ ಉತ್ಸವ ಸಾತ್ವಿಕ ಗುಣದತ್ತ ಸಾಗಿಸುವ ಪರ್ವಕಾಲವಾಗಿದ್ದು, ಎಲ್ಲರೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಮಾತೆಯ ಅನುಗ್ರಹ ಪ್ರಾಪ್ತಿಯಾಗಲು ಬೇಡಿಕೊಳ್ಳೋಣ ಎಂಬುದಾಗಿ ಉಡುಪಿ ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ತಿಳಿಸಿದರು.
ಅವರು ಮಧೂರು ಶ್ರೀ ಕಾಳಿಕಾಂಬ ಮಠಕ್ಕೆ ನವರಾತ್ರಿಯ ವೇಳೆ ಚಿತ್ತೈಸಿ, ಗುರುಪಾದುಕಾ ಪೂಜೆ, ನೂತನ ಪೀಠ ಸಮರ್ಪಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು
ಮಧೂರು ಶ್ರೀ ಕಾಳಿಕಾಂಬಾ ಮಠದ ಅಧ್ಯಕ್ಷ ನ್ಯಾಯವಾದಿ ಕೆ ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಆನೆಗುಂದಿ ಮಠದ ಯೋಜನೆ ಹಾಗೂ ಸಮಾಜದ ಯುವ ತಲೆಮಾರುಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ನೀಡಿದರು.
ಮಠದ ಪದಾಧಿಕಾರಿಗಳು, ಯುವಕ ಸಂಘ, ವಿಶ್ವರೂಪಂ ತಂಡ, ಭಜನಾ ಸಂಘ, ಮಹಿಳಾ ಸಂಘ ಸದಸ್ಯರು ಉಪಸ್ಥಿತರಿದ್ದರು.
ಮಧೂರು ಮಠದ ಉಪಾಧ್ಯಕ್ಷ ಕೆ ಜಗದೀಶ್ ಆಚಾರ್ಯ ಕಂಬಾರು ಸ್ವಾಗತಿಸಿ, ವಂದಿಸಿದರು. ಜಗದ್ಗುರುಗಳನ್ನು ಶ್ರೀಮಠಕ್ಕೆ ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಯಿತು. ಜಗದ್ಗುರುಗಳವರ ಗುರುಪಾದುಕಾ ಪೂಜೆಯನ್ನು ಕೇಶವ ಶರ್ಮ ಇರುವೈಲು, ಮೌನೇಶ್ ಶರ್ಮ, ಮಂಜು ಶರ್ಮ ಪಡುಕುತ್ಯಾರು, ಪುರೋಹಿತ್ ವಾಸುದೇವ ಆಚಾರ್ಯ ನೀರ್ಚಾಲು, ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ನೆರವೇರಿಸಿದರು.