ದುಬೈ: ಇಸ್ರೇಲ್ ತನ್ನ ಅಪರಾಧಗಳನ್ನು ನಿಲ್ಲಿಸದೇ ಇದ್ದರೆ, ಕಠಿಣ ಪರಿಣಾಮ ಅನುಭವಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ದುಬೈ: ಇಸ್ರೇಲ್ ತನ್ನ ಅಪರಾಧಗಳನ್ನು ನಿಲ್ಲಿಸದೇ ಇದ್ದರೆ, ಕಠಿಣ ಪರಿಣಾಮ ಅನುಭವಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್‌ನತ್ತ ಇರಾನ್ ಖಂಡಾಂತರ ಕ್ಷಿಪಣಿಗಳನ್ನು ಹಾರಿಸಿದ ಬಳಿಕ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಗಡಿಗೆ ತನ್ನ ಸೇನೆಯನ್ನು ಇಸ್ರೇಲ್ ಕಳುಹಿಸಿದ ನಂತರ ಮಸೌದ್ ಹೇಳಿಕೆ ನೀಡಿದ್ದಾರೆ.
ಕತಾರ್ ಪ್ರವಾಸಕ್ಕೆ ತೆರಳುವ ವೇಳೆ ಮಾತನಾಡಿರುವ ಅವರು, 'ಇಸ್ರೇಲ್ ತನ್ನ ಅಪರಾಧಗಳನ್ನು ನಿಲ್ಲಿಸದೇ ಇದ್ದರೆ, ತೀವ್ರ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ' ಎಂದಿದ್ದಾರೆ.
ಏಷಿಯಾ ಸಹಕಾರ ಸಂವಾದದಲ್ಲಿಯೂ ಭಾಗವಹಿಸಲಿರುವ ಮಸೌದ್, 'ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿ ಕುರಿತು ಚರ್ಚಿಸುವುದು ಹಾಗೂ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ದೋಹಾ (ಕತಾರ್ ರಾಜಧಾನಿ) ಭೇಟಿ ವೇಳೆ ಮೊದಲ ಆದ್ಯತೆ ನೀಡಲಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ನ ಅಪರಾಧಗಳನ್ನು ಹಾಗೂ ವೈರಿಗಳನ್ನು ಏಷ್ಯಾ ರಾಷ್ಟ್ರಗಳು ಹೇಗೆ ತಡೆಯಬಲ್ಲವು ಎಂಬ ಚರ್ಚೆಗೆ ಎರಡನೇ ಆದ್ಯತೆ ನೀಡಲಾಗಿದೆ' ಎಂದಿದ್ದಾರೆ.
ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದರು.