ಕಾಸರಗೋಡು: ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ದೃಷ್ಟಿ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಮತ್ತು ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಸರಿತಾ ಎಸ್.ಎಲ್. ಉದ್ಘಾಟಿಸಿದರು. ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಆಡಳಿತ ವೈದ್ಯಾಧಿಕಾರಿ ಡಾ.ರಂಜಿತ್ ಪಿ ಹಾಗೂ ಜಿಲ್ಲಾ ಪ್ರಭಾರ ನೇತ್ರ ಸಂಯೋಜಕ ಅಂಚು ಟಿ.ಎನ್ ಮಾತನಾಡಿದರು.
ನಂತರ ಜಿಲ್ಲೆಯ ಆರ್ ಬಿಎಸ್ ಕೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ಜಿಲ್ಲಾ ಆಸ್ಪತ್ರೆ ನೇತ್ರ ತಜ್ಞೆ ಡಾ.ಅಪರ್ಣಾ, ನೀಲೇಶ್ವರ ತಾಲೂಕಾ ಆಸ್ಪತ್ರೆಯ ನೇತ್ರ ತಜ್ಞ ಅಜೀಶ್ ಕುಮಾರ್ ‘ಮಕ್ಕಳಲ್ಲಿ ಕಣ್ಣಿನ ರೋಗಗಳು’ ವಿಷಯ ಕುರಿತು ವಿಷಯ ಮಂಡಿಸಿದರು.
ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ಕಾರ್ಯಕ್ರಮದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಆನಂದಾಶ್ರಮ ರೋಟರಿ ವಿಶೇಷ ಶಾಲೆಯಲ್ಲಿ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಕುರುಡುತನ, ದೃಷ್ಟಿ ಆರೈಕೆ ಮತ್ತು ಕಣ್ಣಿನ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. 'ನಿಮ್ಮ ಕಣ್ಣುಗಳನ್ನು ಪ್ರೀತಿಸಿ ಮಕ್ಕಳೇ' ಎಂಬುದು ಈ ವರ್ಷದ ವಿಶ್ವ ದೃಷ್ಟಿ ದಿನದ ಸಂದೇಶವಾಗಿದೆ.