ಕಜಾನ್ (AP): ಬ್ರಿಕ್ಸ್ ದೇಶಗಳ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಪಾಶ್ಚಿಮಾತ್ಯ ದೇಶಗಳ 'ಅಡ್ಡದಾರಿಯ ಕೆಲಸ'ಗಳಿಗೆ ಈ ಸಂಘಟನೆಯು ಪ್ರತಿಕ್ರಿಯೆಯಂತಿದೆ ಎಂದು ಶ್ಲಾಘಿಸಿದರು.
ಒಟ್ಟು 36 ದೇಶಗಳ ಪ್ರತಿನಿಧಿಗಳು, ನಾಯಕರು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.
ಬ್ರಿಕ್ಸ್ ಒಕ್ಕೂಟವನ್ನು ಸೇರಲು ಆಸಕ್ತಿ ತೋರಿಸಿರುವ ದೇಶಗಳ ಪ್ರತಿನಿಧಿಗಳೂ ಭಾಗಿಯಾಗಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, 'ಪಾಶ್ಚಿಮಾತ್ಯ ದೇಶಗಳು ಅಕ್ರಮ ಹಾಗೂ ಏಕಪಕ್ಷೀಯವಾದ ದಿಗ್ಬಂಧನಗಳು, ಸ್ವರಕ್ಷಣಾ ಕ್ರಮಗಳು, ಕರೆನ್ಸಿ ಮತ್ತು ಷೇರುಪೇಟೆ ಮೇಲೆ ಪ್ರಭಾವ ಬೀರುವ ಕೆಲಸಗಳು, ಪ್ರಜಾತಂತ್ರ ಮತ್ತು ಮಾನವ ಹಕ್ಕುಗಳ ಪರ ಇರುವ ಸೋಗಿನಲ್ಲಿ ಅತಿಯಾಗಿ ಪ್ರಭಾವ ಬೀರುವ ಮೂಲಕ ಜಾಗತಿಕ ದಕ್ಷಿಣದ ದೇಶಗಳ ಬಲವನ್ನು ಕುಗ್ಗಿಸಲು ಯತ್ನಿಸುತ್ತಿವೆ' ಎಂದು ದೂರಿದರು.
'ಇಂತಹ ಅಡ್ಡದಾರಿಯ ಮಾರ್ಗಗಳು ಹೊಸ ಸಂಘರ್ಷಗಳು ಉಂಟಾಗಲು ಕಾರಣವಾಗಿವೆ, ಹಳೆಯ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳಲು ಕಾರಣವಾಗಿವೆ' ಎಂದರು.
ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಶಾಂತಿ ಸೂತ್ರವೊಂದನ್ನು ಚೀನಾ ಮತ್ತು ಬ್ರೆಜಿಲ್ ರೂಪಿಸಿವೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ. ಆದರೆ, ಈ ಶಾಂತಿ ಸೂತ್ರವನ್ನು ಉಕ್ರೇನ್ ಒಪ್ಪಿಲ್ಲ.
ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರೂ ಭಾಗಿಯಾಗಿದ್ದರು. ಗುಟೆರಸ್ ಅವರ ರಷ್ಯಾ ಭೇಟಿಯನ್ನು ಉಕ್ರೇನ್ ಟೀಕಿಸಿದೆ. ಉಕ್ರೇನ್, ಗಾಜಾ, ಲೆಬನಾನ್ ಮತ್ತು ಸುಡಾನ್‌ನಲ್ಲಿ ಸಂಘರ್ಷವು ತಕ್ಷಣವೇ ಕೊನೆಗೊಳ್ಳಬೇಕು ಎಂದು ಗುಟೆರಸ್ ಅವರು ಬ್ರಿಕ್ಸ್ ಸಮಾವೇಶದಲ್ಲಿ ಕರೆ ನೀಡಿದ್ದಾರೆ.
ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳು, ಈ ಶೃಂಗಸಭೆಯು ಭಾರಿ ಯಶಸ್ಸು ಕಂಡಿದೆ ಎಂದು ಹೇಳಿವೆ. ಬ್ರಿಕ್ಸ್ ದೇಶಗಳಲ್ಲಿನ ಜನಸಂಖ್ಯೆಯು ವಿಶ್ವದ ಅರ್ಧದಷ್ಟು ಜನಸಂಖ್ಯೆಗೆ ಸಮ, ಬ್ರಿಕ್ಸ್ ದೇಶಗಳು ಪಾಶ್ಚಿಮಾತ್ಯ ದೇಶಗಳ ಯಜಮಾನಿಕೆಯನ್ನು ಪ್ರಶ್ನಿಸುತ್ತಿವೆ ಎಂಬ ವರದಿಗಳನ್ನು ಪ್ರಸಾರ ಮಾಡಿವೆ.