ತಿರುವನಂತಪುರಂ: ರಾಜ್ಯದಲ್ಲಿಯೂ ಜಿಎಸ್‍ಟಿ ನೋಂದಣಿಗೆ ಅರ್ಜಿ ಸಲ್ಲಿಸುವವರಿಗೆ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಮತ್ತು ದಾಖಲೆ ಪರಿಶೀಲನೆ ಅಕ್ಟೋಬರ್ 8ರಿಂದ ಆರಂಭವಾಗಿದೆ.
ಗುಜರಾತ್, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣದ ಅನುಷ್ಠಾನವು ನಕಲಿ ನೋಂದಣಿಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಅದನ್ನು ಆಧರಿಸಿ ದೇಶದ ಬೇರೆಡೆ ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಸರ್ಕಾರಿ ಅನುಮೋದಿತ ಗುರುತಿನ ದಾಖಲೆಗಳಾದ ಆಧಾರ್ ಮತ್ತು ಪ್ಯಾನ್ ಕಾರ್ಡ್‍ಗಳನ್ನು ನೈಜ ಮಾಲೀಕರ ಅರಿವಿಲ್ಲದೇ ದುರುಪಯೋಗಪಡಿಸಿಕೊಂಡು, ನಕಲಿ ನೋಂದಣಿಗಳನ್ನು ಪಡೆದು, ನಕಲಿ ಬಿಲ್ಲಿಂಗ್ ಮೂಲಕ ಅಕ್ರಮವಾಗಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವ ಮೂಲಕ ತೆರಿಗೆ ವಂಚಿಸುವ ಪ್ರವೃತ್ತಿ ದೇಶಾದ್ಯಂತ ಗಮನಕ್ಕೆ ಬಂದಿದೆ. ಕೇರಳದಲ್ಲೂ ಇಂತಹ ನಕಲಿ ದಾಖಲಾತಿ ಮೂಲಕ ಕೋಟ್ಯಂತರ ತೆರಿಗೆ ವಂಚನೆ ಮಾಡಿರುವುದು ರಾಜ್ಯದ ಜಿಎಸ್ ಟಿ ಗುಪ್ತಚರ ಇಲಾಖೆಯ ತನಿಖೆಯಲ್ಲಿ ಪತ್ತೆಯಾಗಿದೆ. ಇಂತಹ ವಂಚನೆಗಳನ್ನು ತಡೆಯಲು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಮತ್ತು ದಾಖಲೆ ಪರಿಶೀಲನೆಯನ್ನು ಜಾರಿಗೊಳಿಸಲಾಗಿದೆ.