ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳ ಅಂತಿಮ ಕರಡನ್ನು ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಲಾಯಿತು.
ಸರ್ಕಾರ ನೇಮಿಸಿದ್ದ, ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ಕಾರ್ಯಾಲಯದಲ್ಲಿ ಧಾಮಿ ಅವರಿಗೆ ನಿಯಮಾವಳಿಯ ಅಂತಿಮ ಕರಡು ಪ್ರತಿಯನ್ನು ಹಸ್ತಾಂತರಿಸಿತು.
ಕರಡು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧಾಮಿ, 'ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಸಮಾಜದ ಯಾವುದೇ ಸಮುದಾಯ ಗುರಿಯಾಗಿಸಲು ಇದನ್ನು ಜಾರಿಗೊಳಿಸುತ್ತಿಲ್ಲ. ಎಲ್ಲರಿಗೂ ಸಮಾನತೆಯನ್ನು ಕಲ್ಪಿಸುವುದು ಮತ್ತು ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣದ ಉದ್ದೇಶವನ್ನು ಇದು ಹೊಂದಿದೆ' ಎಂದು ಹೇಳಿದರು.
'ಕರಡನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ವಿವಾಹ ಮತ್ತು ವಿಚ್ಛೇದನ, ಉತ್ತರಾಧಿಕಾರ, ಸಹ ಜೀವನದ ಸಂಬಂಧಗಳು, ಜನನ ಮತ್ತು ಮರಣ ನೋಂದಣಿಗೆ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಇದು ಒಳಗೊಂಡಿದೆ' ಎಂದು ಧಾಮಿ ಹೇಳಿದರು.
'ಯುಸಿಸಿ ಅನುಷ್ಠಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ಮತ್ತು ನೌಕರರಿಗೆ ತರಬೇತಿಯ ಅಗತ್ಯವಿದೆ' ಎಂದೂ ಅವರು ಹೇಳಿದರು.
ಯುಸಿಸಿ ಅನುಷ್ಠಾನವು, 2022ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಧಾಮಿ ಅವರು ನೀಡಿದ ಪ್ರಮುಖ ಚುನಾವಣಾ ಭರವಸೆಯಾಗಿದೆ.