ಬಹರಾಯಿಚ್ : ಎನ್‌ಸಿಪಿ (ಅಜಿತ್ ಪವಾರ್ ಬಣ) ಶಾಸಕ ಬಾಬಾ ಸಿದ್ದಿಕಿ ಕೊಲೆ ಆರೋಪ ಎದುರಿಸುತ್ತಿರುವ ಇಬ್ಬರು ಶಂಕಿತರು ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ಗಂದಾರ ಗ್ರಾಮದವರು ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಶಿವಕುಮಾರ್ ಅಲಿಯಾಸ್ ಶಿವ ಗೌತಮ್ ಹಾಗೂ ಮತ್ತೊಬ್ಬ ಬಾಲಕ ಕೊಲೆ ಆರೋಪ ಎದುರಿಸುತ್ತಿದ್ದಾರೆ.
'ಈ ಇಬ್ಬರು ಆರೋಪಿಗಳು ಪುಣೆಯ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಅಪರಾಧಿಕ ಹಿನ್ನೆಲೆ ಇಲ್ಲ. ಆದರೂ, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ಹೇಳಿದ್ದಾರೆ.
ಆರೋಪಿ ಶಿವಕುಮಾರ್ ತಾಯಿ ಸುಮನ್, ತನ್ನ ಪುತ್ರನ ವಿರುದ್ಧದ ಆರೋಪಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,'ನನ್ನ ಮಗ ಪರಿಶ್ರಮಿ ಹಾಗೂ ಶಾಂತ ಸ್ವಭಾವದವನು. ದುಡಿಯಲು ಪುಣೆಗೆ ಹೋಗಿದ್ದ ಆತ, ಹೋಳಿ ಹಬ್ಬಕ್ಕೆ ಊರಿಗೆ ಬಂದಿದ್ದ' ಎಂದು ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ತಾಯಿ ಕುಸುಮ, 'ಮಾಹಿತಿ ಪಡೆಯುವುದಕ್ಕಾಗಿ ಪೊಲೀಸರು ಮನೆಗೆ ಬಂದಾಗಲೇ, ಈ ಪ್ರಕರಣದಲ್ಲಿ ನನ್ನ ಮಗನ ಪಾತ್ರವಿರುವ ಆರೋಪದ ಬಗ್ಗೆ ತಿಳಿಯಿತು' ಎಂದಿದ್ದಾರೆ.