ತಿರುವನಂತಪುರಂ: ಪರಿಶಿಷ್ಟ ಪಂಗಡಗಳ ವ್ಯವಸ್ಥಿತ ಮತಾಂತರ ಹಾಗೂ ಅವರ ಜಮೀನು ಒತ್ತುವರಿ ಮಾಡುವುದನ್ನು ತಡೆಯುವಂತೆ ಒತ್ತಾಯಿಸಿ ಆದಿವಾಸಿ ಮಹಾಸಭಾ ಕೇಂದ್ರ ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ ಅವರಿಗೆ ಮನವಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ನಿಯಮಾವಳಿಗಳನ್ನು ಉಲ್ಲಂಘಿಸಿ, ಕೇರಳದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ವ್ಯಾಪಕವಾಗಿ ನೀಡುವುದನ್ನು ಮತ್ತು ವಿವಾಹದ ಮೂಲಕ ಮೀಸಲಾತಿ ಪ್ರಯೋಜನಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ.
ಪರಿಶಿಷ್ಟ ಪಂಗಡದವರ ಜಮೀನು ಒತ್ತುವರಿ ನಿಲ್ಲಿಸಿ, ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕು. ಅತಿಕ್ರಮಣದಾರರು ಮತ್ತು ಸಹಚರರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು.
ಆಗಾಗ ಹೊಸ ಗುಂಪುಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಲಾಗಿದೆ. ಮಲಯ ಸಮಾಜದ ಮುಖಂಡ ಥಮನ್ ಮೆಟ್ಟೂರು ಅವರ 105ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಲು ಕೇಂದ್ರ ಸಚಿವರು ತೊಡುಪುಳಕ್ಕೆ ಆಗಮಿಸಿದ್ದಾಗ ಈ ಮನವಿಯನ್ನು ನೀಡಲಾಯಿತು.
ಆದಿವಾಸಿ ಮಹಾಸಭಾ ಅಧ್ಯಕ್ಷ ಮೋಹನನ್ ತ್ರಿವೇಣಿ, ಪ್ರಧಾನ ಕಾರ್ಯದರ್ಶಿ ಕೆ. ಶಶಿಕುಮಾರ್, ಉಪಾಧ್ಯಕ್ಷ ಎಸ್. ಕುಟ್ಟಪ್ಪನ್ ಕಣಿ ತಂಡದಲ್ಲಿದ್ದರು. ಕೇರಳದ ಬುಡಕಟ್ಟು ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು.