ಬಿಲಾಸ್‌ಪುರ : ಹರಿಯಾಣದಂತೆ ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿಯೂ ತಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಶುಕ್ರವಾರ ಹೇಳಿದ್ದಾರೆ.
ಶ್ರೀ ನೈನಾ ದೇವಿ ದೇವಸ್ಥಾನದಲ್ಲಿ ಕಂಜಕ್ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯ ನಿರ್ವಹಣೆಯಿಂದ ಜನರು ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.
'ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಾಕಷ್ಟು ಸಾಧನೆ ಮಾಡಿದೆ. ಇದಕ್ಕೆ ಜನರು ಮತ್ತು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.
ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಹರಿಯಾಣದಲ್ಲಿ ಒಂದು ಭ್ರಮೆ ಸೃಷ್ಟಿಯಾಗಿತ್ತು. ಆದರೆ ವಾಸ್ತವ ಬೇರೆಯಾಗಿತ್ತು. ಅಂತಿಮವಾಗಿ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಜಮ್ಮು-ಕಾಶ್ಮೀರದಲ್ಲಿ ಮತದಾನದ ಪ್ರಮಾಣ ಹೆಚ್ಚಳವಾಗಿದೆ' ಎಂದು ಹೇಳಿದ್ದಾರೆ.
ಹರಿಯಾಣದ ಜನರು - ಯುವಕರು, ರೈತರು, ಮಹಿಳೆಯರು ಮತ್ತು ಇತರ ಎಲ್ಲಾ ವರ್ಗಗಳು ವಿರೋಧ ಪಕ್ಷಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಅವರ ನೀತಿಗಳು ಮತ್ತು ನಾಯಕತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದರು.
'ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನ ಪ್ರಮಾಣ ಶೇ 6-8ರಷ್ಟು ಮತದಾನವಾಗುತ್ತಿತ್ತು. ಈಗ ಅದು ಶೇ 60ಕ್ಕೆ ಏರಿಕೆಯಾಗಿದೆ. ಇದು ಜನರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ, ಮತ್ತು 370ನೇ ವಿಧಿಯನ್ನು ರದ್ದುಪಡಿಸುವುದನ್ನು ಬೆಂಬಲಿಸಿದ್ದಾರೆ ಎನ್ನುವುದರ ಪ್ರತೀಕ' ಎಂದು ಸಮರ್ಥಿಸಿಕೊಂಡಿದ್ದಾರೆ.