ಬರೇಲಿ: ನಿರ್ದಿಷ್ಟ ಧರ್ಮವೊಂದರ ಸಮಾಜ ವಿರೋಧಿಗಳು ಜನಸಂಖ್ಯಾ ಸಮರ, ಅಂತರರಾಷ್ಟ್ರೀಯ ಪಿತೂರಿಯ ಮೂಲಕ ಭಾರತದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದು 'ಲವ್ ಜಿಹಾದ್'ನ ಗುರಿ ಎಂದು ಸ್ಥಳೀಯ ನ್ಯಾಯಾಲಯವೊಂದು ಹೇಳಿದೆ.
ಅಕ್ರಮ ಮತಾಂತರಕ್ಕೆ ಮತ್ತು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇರುವಂತಹ ಪರಿಸ್ಥಿತಿಯನ್ನು ಭಾರತದಲ್ಲಿಯೂ ಸೃಷ್ಟಿಸುವ ಉದ್ದೇಶದಿಂದ ಹಿಂದೂ ಹುಡುಗಿಯರಿಗೆ 'ಪ್ರೀತಿ'ಯ ಆಮಿಷವೊಡ್ಡಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ತ್ವರಿತಗತಿ ನ್ಯಾಯಾಲಯ) ರವಿ ಕುಮಾರ್ ದಿವಾಕರ್ ಅವರು ಹೇಳಿದ್ದಾರೆ.
ಅಕ್ರಮ ಮತಾಂತರವು ದೇಶದ ಭದ್ರತೆ, ಸಾರ್ವಭೌಮತ್ವಕ್ಕೆ ಗಣನೀಯ ಬೆದರಿಕೆ ಒಡ್ಡುತ್ತದೆ ಎಂದು ಅವರು ಹೇಳಿದ್ದಾರೆ.
25 ವರ್ಷ ವಯಸ್ಸಿನ ಮೊಹಮ್ಮದ್ ಅಲಿಂ ಎನ್ನುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಈ ಮಾತು ಹೇಳಿದ್ದಾರೆ. ತನ್ನ ನಿಜ ಅಸ್ಮಿತೆಯನ್ನು ಮರೆಮಾಚಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಬೆದರಿಕೆ ಒಡ್ಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ಅಲಿಂ ಅವರಿಗೆ ₹1 ಲಕ್ಷ ದಂಡ ಕೂಡ ವಿಧಿಸಲಾಗಿದೆ.
ಅಪರಾಧಕ್ಕೆ ನೆರವಾದ ಕಾರಣಕ್ಕಾಗಿ ಅಲಿಂ ಅವರ ತಂದೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 20 ವರ್ಷ ವಯಸ್ಸಿನ ವಿದ್ಯಾರ್ಥಿನಿಯು ದಾಖಲಿಸಿದ್ದ ದೂರು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ.
'ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಇರುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ಪಿತೂರಿ ನಡೆದಿದೆ' ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ. ಅಲಿಂ ಅವರು ತಮ್ಮ ಹೆಸರು 'ಆನಂದ್' ಎಂದು ಹೇಳಿ ವಿದ್ಯಾರ್ಥಿನಿಯನ್ನು ವಂಚಿಸಿದ್ದರು. ಆತ 'ಆನಂದ್' ಅಲ್ಲ ಎಂಬುದು ಗೊತ್ತಾದ ನಂತರ ವಿದ್ಯಾರ್ಥಿನಿ ದೂರು ದಾಖಲಿಸಿದ್ದರು.
ಕೋಚಿಂಗ್ ಕೇಂದ್ರವೊಂದರಲ್ಲಿ ಅಲಿಂ ಅವರು ಈ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದರು. ನಂತರ ದೇವಸ್ಥಾನವೊಂದರಲ್ಲಿ ಆಕೆಯನ್ನು ವರಿಸಿದ್ದರು. ಆಕೆ ಗರ್ಭಿಣಿಯಾದ ನಂತರ, ಗರ್ಭಪಾತಕ್ಕೆ ಕಾರಣವಾಗುವ ವಸ್ತುವನ್ನು ಬೆರೆಸಿದ ರಸವನ್ನು ಆಕೆಗೆ ಕುಡಿಸಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಕಳುಹಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಮಾನಸಿಕ ಒತ್ತಡದ ಮೂಲಕ, ಮದುವೆಯ ಹಾಗೂ ಉದ್ಯೋಗದ ಪ್ರಲೋಭನೆಯ ಮೂಲಕ ಮತಾಂತರ ನಡೆಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ವಿದೇಶಗಳಿಂದ ಹಣಕಾಸಿನ ನೆರವು ಇದಕ್ಕೆ ಸಿಗುತ್ತಿರಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದೆ.
'ಇದು ಲವ್ ಜಿಹಾದ್ ಮೂಲಕ ಮತಾಂತರ ಮಾಡಲು ನಡೆಸಿದ ಯತ್ನ. ಲವ್ ಜಿಹಾದ್‌ನಲ್ಲಿ ಮುಸ್ಲಿಂ ಪುರುಷರು ತಮ್ಮ ಧಾರ್ಮಿಕ ಅಸ್ಮಿತೆಯನ್ನು ಮರೆಮಾಚಿ ಹಿಂದೂ ಮಹಿಳೆಯರನ್ನು ಗುರಿ ಮಾಡಿಕೊಳ್ಳುತ್ತಾರೆ. ಲವ್ ಜಿಹಾದ್‌ಗೆ ಭಾರಿ ಪ್ರಮಾಣಲ್ಲಿ ಹಣ ಬೇಕಾಗುತ್ತದೆ. ಹೀಗಾಗಿ, ವಿದೇಶಿ ಹಣಕಾಸಿನ ನೆರವನ್ನು ಅಲ್ಲಗಳೆಯಲಾಗದು' ಎಂದು ನ್ಯಾಯಾಧೀಶರು ಹೇಳಿದ್ದಾರೆ. ಲವ್ ಜಿಹಾದ್‌ಗೆ ಧಾರ್ಮಿಕ ಸಮುದಾಯವನ್ನು ಇಡಿಯಾಗಿ ಹೊಣೆ ಮಾಡಲು ಆಗದು ಎಂದು ಹೇಳಿದ್ದಾರೆ.
ಸಮಸ್ಯೆಯನ್ನು ಸಕಾಲದಲ್ಲಿ ಪರಿಹರಿಸದಿದ್ದರೆ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂದು ಅದು ಹೇಳಿದೆ.
'ಲವ್ ಜಿಹಾದ್' ಮೂಲಕ ಅಕ್ರಮ ಮತಾಂತರವನ್ನು ತಡೆಯುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು 'ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯ್ದೆ - 2021'ನ್ನು ಜಾರಿಗೆ ತಂದಿದೆ ಎಂದು ನ್ಯಾಯಾಲಯ ಹೇಳಿದೆ.
'ಪ್ರತಿ ವ್ಯಕ್ತಿಗೂ ತನ್ನ ಧರ್ಮವನ್ನು ಪಾಲಿಸುವ ಮತ್ತು ಅದರ ಬಗ್ಗೆ ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಸಂವಿಧಾನವು ನೀಡುತ್ತದೆ. ಆದರೆ, ಲವ್ ಜಿಹಾದ್ ಮೂಲಕ ನಡೆಯುವ ಅಕ್ರಮ ಮತಾಂತರದ ಮೂಲಕ ಈ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲು ಆಗುವುದಿಲ್ಲ' ಎಂದು ನ್ಯಾಯಾಲಯವು ಹೇಳಿದೆ.