ತಿರುವನಂತಪುರ: ಸಮರ್ಪಕ ಪುನರ್ವಸತಿ ಸೌಲಭ್ಯ ಕಲ್ಪಿಸಿಲ್ಲ ಎಂದು ಬೇಸರಗೊಂಡಿರುವ ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳ ಭೂಕುಸಿತ ಸಂತ್ರಸ್ತರು ಈಗ ಪ್ರತಿಭಟನೆ ಆರಂಭಿಸಿದ್ದಾರೆ.
ಇತ್ತೀಚೆಗೆ ಸಂತ್ರಸ್ತರು ಕಾರ್ಯಪಡೆ ರಚಿಸಿಕೊಂಡಿದ್ದಾರೆ. ಅದರ ನೇತೃತ್ವದಲ್ಲಿಯೇ ಬುಧವಾರ ವಯನಾಡ್ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಿತು.
ಶಾಶ್ವತ ಪುನರ್ವಸತಿ ಕ್ರಮಗಳನ್ನು ಚುರುಕುಗೊಳಿಸಬೇಕು, ಬದುಕಿಗಾಗಿ ನೆರವಾಗಬೇಕು. ಬ್ಯಾಂಕ್ ಸಾಲ ಬಾಕಿ ಮನ್ನಾ ಮಾಡಬೇಕು, ನಾಪತ್ತೆ ಆಗಿರುವ 47 ಜನರಿಗೆ ಶೋಧ ಮುಂದುವರಿಸಬೇಕು ಎಂಬುದು ಬೇಡಿಕೆಗಳು.
ದೇಹದ ಅಂಗಾಂಗಗಳು ಪತ್ತೆಯಾಗಿರುವ ಪ್ರಕರಣದಲ್ಲಿ ಮೃತರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸುವ ಪ್ರಕ್ರಿಯೆಯೂ ವಿಳಂಬವಾಗಿದೆ ಎಂದೂ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲಿಕ್ಕಾಗಿ ಉಪನಗರ ನಿರ್ಮಿಸಲು ರಾಜ್ಯ ಸರ್ಕಾರ ಎರಡು ಚಹಾ ತೋಟಗಳನ್ನು ಗುರುತಿಸಿದೆ. ಆದರೆ, ಅವುಗಳ ಸ್ವಾಧೀನ ಸಾಧ್ಯವಿಲ್ಲ. ಕಾನೂನು ತೊಡಕು ಉಂಟಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, 'ಸಂತ್ರಸ್ತರಿಗೆ ಹಣಕಾಸು ನೆರವು ಸೌಲಭ್ಯವನ್ನು ತ್ವರಿತಗತಿಯಲ್ಲಿ ಒದಗಿಸಲು ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು' ಎಂದು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬುಧವಾರ ನಿರ್ದೇಶಿಸಿದೆ.
ದುರಂತವನ್ನು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಎಂದು ಘೋಷಿಸಬೇಕೆ ಎನ್ನುವುದು ಉನ್ನತಾಧಿಕಾರ ಸಮಿತಿಯ ಪರಿಶೀಲನೆಯಲ್ಲಿದೆ. ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಕೋರ್ಟ್‌ಗೆ ಮಾಹಿತಿಯನ್ನು ನೀಡಿತು. ಸಂತ್ರಸ್ತರಿಗೆ ನಿತ್ಯ ₹300 ರೂಪಾಯಿ ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮವನ್ನು ಮತ್ತೆ 30 ದಿನ ಕಾಲ ವಿಸ್ತರಿಸಲಾಗುವುದು ಎಂದು ತಿಳಿಸಿತು.
ಹೈಕೋರ್ಟ್ ಸ್ವಪ್ರೇರಿತವಾಗಿ ದಾಖಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಶ್ಯಾಮ್ ಕುಮಾರ್ ವಿ.ಎಂ ಅವರಿದ್ದ ಪೀಠ ನಡೆಸಿತು. ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಲಾಯಿತು. ಜುಲೈ 30ರಂದು ಸಂಭವಿಸಿದ್ದ ಭೂಕುಸಿತದಲ್ಲಿ 250 ಜನರು ಮೃತಪಟ್ಟಿದ್ದರು.