ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆ ಉದ್ದಕ್ಕೂ ಗಸ್ತು ಆರಂಭಕ್ಕೆ ಸಂಬಂಧಿಸಿ ಚೀನಾ, ಭಾರತ ನಡುವೆ ಒಪ್ಪಂದ ಆಗಿದ್ದರೂ, 'ಹಲವು ಪ್ರಶ್ನೆಗಳು ಉಳಿದಿವೆ' ಎಂದು ಕಾಂಗ್ರೆಸ್ ಬುಧವಾರ ಪ್ರತಿಕ್ರಿಯಿಸಿದೆ.
ಅಲ್ಲದೆ, 'ಕಳೆದ ದಶಕದಲ್ಲಿನ ಕೆಟ್ಟ ವಿದೇಶಾಂಗ ನೀತಿಯಿಂದಾಗಿ ದೇಶಕ್ಕೆ ಆದ ಹಿನ್ನಡೆಗೆ ಈಗ ಗೌರವಯುತ ಪರಿಹಾರ ಸಿಗಬಹುದು' ಎಂಬ ವಿಶ್ವಾಸವನ್ನೂ ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿದೆ.
ಚೀನಾದ ಜೊತೆಗಿನ ಒಪ್ಪಂದ ಕುರಿತು ಮೋದಿ ಸರ್ಕಾರ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಪಕ್ಷ ಆಗ್ರಹಪಡಿಸಿದ್ದು, ಆರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಚೀನಾ ಜೊತೆಗಿನ ಅನಿಶ್ಚಿತತೆಯನ್ನು 'ದುರಂತ ಕಥೆ' ಎಂದು ಬಣ್ಣಿಸಿದ್ದು, ಪ್ರಧಾನಿ ವಿರುದ್ಧ ಹರಿಹಾಯ್ದರು.
ಗಾಲ್ವಾನ್ ಸಂಘರ್ಷದ ಬಳಿಕ 2020ರ ಜೂ.19ರಂದು ಪ್ರಧಾನಿ ಚೀನಾಗೆ 'ಕ್ಲೀನ್ ಚಿಟ್' ನೀಡಿದ್ದರಿಂದ ಭಾರತದ ನಿಲುವು ಸಡಿಲವಾಯಿತು ಎಂದು ಆರೋಪಿಸಿದರು. ಆಗ ಪ್ರಧಾನಿ, 'ನಮ್ಮ ಗಡಿಗೆ ಯಾರೂ ನುಗ್ಗಿ ಬಂದಿಲ್ಲ, ಗಡಿಯೊಳಗೆ ಯಾರೊಬ್ಬರೂ ಇಲ್ಲ' ಎಂದು ಹೇಳಿದ್ದರು.
'ಪ್ರಧಾನಿ ಹೇಳಿಕೆ ಚೀನಾಗೆ ತಾನು ಅತಿಕ್ರಮಿಸಿದ್ದ ಭಾರತದ ಭೂಮಿ ಮೇಲೆ ಹಕ್ಕು ಸ್ಥಾಪಿಸಲು ಅವಕಾಶ ನೀಡಿತು. ಬಿಕ್ಕಟ್ಟನ್ನು ಮೋದಿ ಸರ್ಕಾರ ನಿಭಾಯಿಸಿದ್ದನ್ನು ಡಿಡಿಎಲ್‌ಜೆಯಂತಿದೆ (ನಿರಾಕರಿಸು, ಗೊಂದಲ ಮೂಡಿಸು, ಸುಳ್ಳು ಹೇಳು, ಸಮರ್ಥಿಸಿಕೊ)' ಎಂದು ಟೀಕಿಸಿದರು.
ಗಡಿಯಲ್ಲಿ ಎದುರಾಗಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಅನುವಾಗುವಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೇಳಲಾಯಿತು. ಆದರೆ, ನಾಲ್ಕು ವರ್ಷಗಳಲ್ಲಿ ಇದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳು:
ಸೇನಾಪಡೆಗಳು ಡೆಪ್ಸಾಂಗ್‌ನಿಂದ ಈ ಹಿಂದಿನಂತೆ ಐದು ಗಸ್ತು ಪಾಯಿಂಟ್‌ವರೆಗೂ ಗಸ್ತು ನಡೆಸಲಿವೆಯೇ?
ಕಳೆದ ನಾಲ್ಕು ವರ್ಷಗಳಿಂದ ಗಸ್ತು ನಡೆಯದ ಡೆಮ್‌ಚೋಕ್‌ನ ಮೂರು ಪಾಯಿಂಟ್‌ವರೆಗೂ ಇನ್ನು ಮುಂದೆ ಗಸ್ತು ಮುಂದುವರಿಯಲಿದೆಯೇ?
ಭಾರತೀಯ ಯೋಧರಿಗೆ ಪಾಂಗಾಂಗ್ ಸರೋವರದ ಫಿಂಗರ್ 3 ಗಸ್ತು ಠಾಣೆ ಬಳಿಯೇ ತಡೆಒಡ್ಡಲಾಗುವುದೇ? ಫಿಂಗರ್ 8 ಠಾಣೆವರೆಗೆ ಹೋಗಬಹುದೇ? ಗೋಗ್ರಾಹಾಟ್ ಸ್ಪ್ರಿಂಗ್ಸ್‌ನ 3 ಗಸ್ತು ಠಾಣೆವರೆಗೆ ಹೋಗಲು ಅವಕಾಶ ಇದೆಯೇ ?
ಚುಶೂಲ್ ವಲಯದ ಹೆಲ್ಮೆಟ್ ಟಾಪ್ ಮುಕ್ಪಾ ರೇ ರೆಜಾಂಗ್ ಲಾ ರಿಂಚೆನ್ ಲಾ ಟೇಬಲ್ ಟಾಪ್ ಗುರುಂಗ್ ಪರ್ವತ ಭಾಗದಲ್ಲಿ ಸಾಂಪ್ರದಾಯಿಕ ಬಯಲು ಪ್ರವೇಶಿಸುವ ಅವಕಾಶ ಸೈನಿಕರಿಗೆ ಇದೆಯೇ?
ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿರುವ ಮೇಜರ್ ಶೈತಾನ್ ಸಿಂಗ್ ಅವರ ಸ್ಮಾರಕವುಳ್ಳ ರೆಜಾಂಗ್ ಲಾದಲ್ಲಿನ 'ಬಫರ್ ವಲಯ'ವು ಇನ್ನು ಇತಿಹಾಸವೇ?