ಪತ್ತನಂತಿಟ್ಟ: ಎಡಿಎಂ ನವೀನ್ ಬಾಬು ಅವರ ಅಂತ್ಯಕ್ರಿಯೆ ಕಣ್ಣೀರಿನ ಕೋಡಿಯೊಂದಿಗೆ ನಿನ್ನೆ ನಡೆಯಿತು. ನಾಲ್ಕು ಗಂಟೆಗೆ ಮನೆ ಪರಿಸರದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದವು.
ನೂರಾರು ಜನರು ನವೀನ್ ಬಾಬು ಅವರಿಗೆ ಮನೆ ಹಾಗೂ ಕಲೆಕ್ಟರೇಟ್ ನಲ್ಲಿ ನಮನ ಸಲ್ಲಿಸಿದರು. ಅವರ ಮಕ್ಕಳಾದ ನಿರಂಜನ ಮತ್ತು ನಿರುಪಮಾ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ನಿನ್ನೆ ಬೆಳಗ್ಗೆ ಶೋಕಾಚರಣೆಯ ಮೂಲಕ ಪತ್ತನಂತಿಟ್ಟ ಕಲೆಕ್ಟರೇಟ್‍ಗೆ ಮೃತದೇಹ ಕೊಂಡೊಯ್ಯಲಾಗಿತ್ತು. ಮೃತದೇಹಕ್ಕೆ ಗೌರವ ಸಲ್ಲಿಸಲು ಸಚಿವರು, ಐಎಎಸ್ ಅಧಿಕಾರಿಗಳು, ಹಳೆಯ ಸಹೋದ್ಯೋಗಿಗಳು ಆಗಮಿಸಿದ್ದರು. ಕಂದಾಯ ಸಚಿವ ಕೆ.ರಾಜನ್ ಆರೋಗ್ಯ ಸಚಿವೆ ವೀಣಾ ಜಾರ್ಜ್, ಉಪಸಭಾಪತಿ ಚಿತ್ತಯಂ ಗೋಪಕುಮಾರ್ ಭಾಗವಹಿಸಿದ್ದರು. ಪತ್ತನಂತಿಟ್ಟದ ಮಾಜಿ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಅಂತಿಮ ದರ್ಶನ ಪಡೆದರು. ನವೀನ್ ಬಾಬು ಒಬ್ಬ ಅತ್ಯುತ್ತಮ ಅಧಿಕಾರಿ ಎಂದು ಪತ್ತನಂತಿಟ್ಟ ಮಾಜಿ ಜಿಲ್ಲಾಧಿಕಾರಿ ಪಿ.ಬಿ.ನೂಹ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಮೃತ ದೇಹವನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಬೆಳಗ್ಗೆ 11.30ರ ಸುಮಾರಿಗೆ ಮಲಯಾಳಪುಳದ ಮನೆಗೆ ತರಲಾಗಿತ್ತು.
ಕಣ್ಣೂರಿನಿಂದ ಪತ್ತನಂತಿಟ್ಟಕ್ಕೆ ವರ್ಗಾವಣೆಯಾಗುವ ಸಂಬಂಧ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿದ್ದರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಆಗಮಿಸಿ ಅವಹೇಳನಕಾರಿ ಭಾಷಣ ಮಾಡಿದ್ದು, ನವೀನ್ ಬಾಬು ಅವರು ವಾಸವಿದ್ದ ಮನೆಯಲ್ಲೇ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು. ಘಟನೆಯಲ್ಲಿ ಕಣ್ಣೂರು ನಗರ ಪೋಲೀಸರು ದಿವ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊರಿಸಿದ್ದಾರೆ.