ಕಾಸರಗೋಡು: ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ ತೀರ್ಪಿನ ಬಗ್ಗೆ ಅಸಹಿಷ್ಣುತೆ ತೋರಿಸುತ್ತಿರುವವರು ಪ್ರಕರಣದ ಆರೋಪಗಳ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧರಾಗುವಂತೆ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಸಿಪಿಎಂ ಮುಖಂಡ ವಿ.ವಿ. ರಮೇಶನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯದ ತೀರ್ಪಿನ ಬಗ್ಗೆ ರಮೇಶನ್ ಸುಳ್ಳುಪ್ರಚಾರ ಮಾಡುತ್ತಿದ್ದಾರೆ.
ಸುಂದರ ಅವರ ನಾಮಪತ್ರ ಹಿಂಪಡೆಯುವ ವಿಚಾರವಾಗಿ ಎಡ-ಬಲ ರಂಗಗಳು ಹಾಗೂ ಬಿಜೆಪಿ ವಿರೋಧಿ ಮಾಧ್ಯಮಗಳು ಪಕ್ಷದ ವಿರುದ್ಧ ಭಾರೀ ಅಪಪ್ರಚಾರ ನಡೆಸಿಕೊಂಡು ಬಂದಿದೆ. ಸುಳ್ಳು ಪ್ರಚಾರ ನಡೆಸಿದವರಿಗೆ ನ್ಯಾಯಾಲಯ ತೀರ್ಪು ಭಾರೀ ಪ್ರಹಾರ ನೀಡಿದೆ. ಈ ಆಘಾತ ಮರೆಮಾಚಲು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಉಂಟಾದ ವಿಳಂಬ, ಪ್ರಕರಣ ಖುಲಾಸೆಗೊಳಿಸಲು ಕಾರಣವಾಗಿದೆ ಎಂಬುದಾಗಿ ಸುಳ್ಳು ಪ್ರಚಾರ ಹರಿಯಬಿಡಲಾಗಿದೆ. ಬಿಜೆಪಿ ಸಾಧಿಸಿದ ಈ ಮಹತ್ತರವಾದ ರಾಜಕೀಯ ಮತ್ತು ಕಾನೂನಾತ್ಮಕ ಗೆಲುವಿಗೆ ಕಳಂಕ ತಂದೊಡ್ಡುವುದು ಬಿಜೆಪಿ ವಿರೋಧಿ ಪಾಳೆಯದ ಗುರಿಯಾಗಿದೆ.
ಕಾಂಗ್ರೆಸ್ ಮುಖಂಡ, ಮಾಜಿ ಪ್ರಾಸಿಕ್ಯೂಷನ್ ಮಹಾನಿರ್ದೇಶಕ ವಕೀಲ ಆಸಿಫ್ ಅಲಿ ಆರೋಪ ನಿರಾಧಾರ. ಈ ಸಂದರ್ಭದಲ್ಲಿ ನಕಲಿ ದಾಖಲೆ ಹಾಗೂ ಹೇಳಿಕೆಗಳನ್ನು ತಯಾರಿಸಿ, ಕೆ. ಸುರೇಂದ್ರನ್ ಸೇರಿದಂತೆ ಆರೋಪಿಗಳನ್ನು ಸುಲ್ಳುಕೇಸಿನಲ್ಲಿ ಸಿಲುಕಿಸಲು ತನಿಖಾ ತಂಡ ಮತ್ತು ರಾಜ್ಯ ಸರ್ಕಾರ ಪ್ರಯತ್ನಿಸಿದೆ. ಸುಂದರ ಅವರ ಹೇಳಿಕೆ ನಂಬಿಕೆಗೆ ಅರ್ಹವಾದುದಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಬಗ್ಗೆ ವಕೀಲ ಆಸಿಫ್ ಅಲಿ ಸೇರಿದಂತೆ ಯಾರೊಂದಿಗೂ ಮುಕ್ತ ಸಂವಾದಕ್ಕೆ ಬಿಜೆಪಿ ಸಿದ್ಧವಿದೆ ಎಂದೂ ಶ್ರೀಕಾಂತ್ ತಿಳಿಸಿದ್ದಾರೆ.