ನವದೆಹಲಿ: ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ಅವಕಾಶ ನಿರಾಕರಿಸಿದ ಹಿಂದೆಯೇ, ವಾಸ್ತವ್ಯ ಹೂಡಿದ್ದ ಲಡಾಕ್ ಭವನದಲ್ಲಿಯೇ ಭಾನುವಾರ ಧರಣಿ ಆರಂಭಿಸಿದರು.
'ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ನನಗೆ ಅವಕಾಶವನ್ನು ನಿರಾಕರಿಸಲಾಯಿತು.
ಸಂವಿಧಾನದ 6ನೇ ಪರಿಚ್ಛೇದದಲ್ಲಿ ಲಡಾಕ್ ಸೇರ್ಪಡೆಗೆ ಒತ್ತಾಯಿಸಿ ವಾಂಗ್ಚುಕ್ ಪ್ರತಿಭಟಿಸುತ್ತಿದ್ದಾರೆ. ಅವರೊಂದಿಗೆ 18 ಜನರು ಧರಣಿ ಕುಳಿತಿದ್ದು, 'ಭಾರತ್ ಮಾತಾ ಕೀ ಜೈ', 'ಜೈ ಲಡಾಕ್', 'ಸೇವ್ ಲಡಾಕ್, ಸೇವ್ ಹಿಮಾಲಯ' ಘೋಷಣೆಗಳನ್ನು ಕೂಗಿದರು.
'ಮತ್ತೊಂದು ನಿರಾಕರಣೆ, ಮತ್ತೆ ಜಿಗುಪ್ಸೆ. ಧರಣಿ ಪ್ರತಿಭಟನೆಗೆ ನಿಯೋಜಿಸಲಾದ ಸ್ಥಳದಲ್ಲಿಯೂ ಪ್ರತಿಭಟನೆಗೆ ಅವಕಾಶ ನಿರಾಕರಿಸಿ ಬೆಳಿಗ್ಗೆ ಪತ್ರ ನೀಡಲಾಗಿದೆ' ಎಂದು ಅವರು ಪ್ರತಿಕ್ರಿಯಿಸಿದರು.
ಬೇಡಿಕೆ ಈಡೇರಿಸಲು ಒತ್ತಾಯಿಸಿ ವಾಂಗ್ಚುಕ್ ಅವರು ಲೆಹ್‌ನಿಂದ ಒಂದು ತಿಂಗಳ ಹಿಂದೆ 'ದೆಹಲಿ ಚಲೋ ಪಾದಯಾತ್ರೆ' ಆರಂಭಿಸಿದ್ದರು. ಲಡಾಕ್ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸಬೇಕು. ರಾಜ್ಯ ಸ್ಥಾನಮಾನ ನೀಡಬೇಕು, ಲೋಕಸೇವಾ ಆಯೋಗ ಸ್ಥಾಪಿಸಬೇಕು, ಲೆಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗ ಪ್ರತ್ಯೇಕ ಲೋಕಸಭೆ ಕ್ಷೇತ್ರ ಇರಬೇಕು ಎಂಬುದು ಬೇಡಿಕೆಗಳಾಗಿವೆ.
ಪಾದಯಾತ್ರೆಯಲ್ಲಿ ಬಂದಿದ್ದ ಹಲವು ಪ್ರತಿಭಟನಕಾರರು ಶನಿವಾರವೇ ಮರಳಿದ್ದರು. ಉಳಿದವರು ವಾಂಗ್ಚುಕ್ ಅವರೊಂದಿಗೆ ಭಾನುವಾರ ಧರಣಿಯಲ್ಲಿ ಭಾಗವಹಿಸಿದರು.