ಮುಂಬೈ: ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವದ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನ್ಯಾಯಾಲಯವು ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯು ಮೇಲ್ನೋಟಕ್ಕೆ ಮಾನಹಾನಿಕರವಾಗಿದೆ ಎಂದು ನಾಸಿಕ್‌ನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ದೀಪಾಲಿ ಪರಿಮಳ್ ಕಡುಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಕರಣದ ಮುಂದಿನ ವಿಚಾರಣೆಯಂದು ರಾಹುಲ್ ಗಾಂಧಿ ಖುದ್ದು ಹಾಜರಾಗುವ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನನಷ್ಟ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಗಾಂಧಿ ವಿರುದ್ಧ ವಿಚಾರಣೆ ನಡೆಸಲು ಅವಕಾಶವಿದೆ ಎಂದು ನ್ಯಾಯಾಲಯವು ತಿಳಿಸಿದೆ.
2022ರ ನವೆಂಬರ್‌ನಲ್ಲಿ ಪತ್ರಿಕಾಗೋಷ್ಠಿವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, 'ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ' ಎಂದು ಹೇಳಿದ್ದರು. ಜತೆಗೆ, 'ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು' ಎಂದು ಪ್ರತಿಪಾದಿಸಿದ್ದರು.
ಈ ಪತ್ರಿಕಾಗೋಷ್ಠಿಯನ್ನು ನಾನು ಕೂಡ ವೀಕ್ಷಿಸಿದ್ದೇನೆ ಎಂದು ಎನ್‌ಜಿಒವೊಂದರ ನಿರ್ದೇಶಕರಾಗಿರುವ ದೂರುದಾರರು ಹೇಳಿದ್ದಾರೆ. ಗಾಂಧಿ ಅವರು ಎರಡು ಸಂದರ್ಭಗಳಲ್ಲಿ ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಮೂಲಕ ಸಮಾಜದಲ್ಲಿ ಅವರ ಪ್ರತಿಷ್ಠೆಯನ್ನು ದೂಷಿಸಲು ಪ್ರಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸಾವರ್ಕರ್ ಅವರು 'ಬಿಜೆಪಿ ಮತ್ತು ಆರ್‌ಎಸ್‌ಎಸ್ ವಂಶಾವಳಿ' ಎಂದು ರಾಹುಲ್ ಗಾಂಧಿ ಹೇಳಿರುವುದು ಸರಿಯಲ್ಲ ಎಂದು ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.