ತಿರುವನಂತಪುರಂ: ವಾಮನಪುರಂನ ರಾಜ್ಯ ಹೆದ್ದಾರಿಯಲ್ಲಿ ಮುಖ್ಯಮಂತ್ರಿಗಳ ವಾಹನ ಯಾತ್ರೆ ಮಧ್ಯೆ ಅಪಘಾತಕ್ಕೀಡಾಗಿದೆ. ಸೋಮವಾರ ಸಂಜೆ 6.20ರ ಸುಮಾರಿಗೆ ಮುಖ್ಯಮಂತ್ರಿಗಳು ಮತ್ತು ಅವರ ತಂಡ ಕೊಟ್ಟಾಯಂನಿಂದ ತಿರುವನಂತಪುರಕ್ಕೆ ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಸ್ಕೂಟರ್ ಪ್ರಯಾಣಿಕನನ್ನು ರಕ್ಷಿಸಲು ಮುಖ್ಯಮಂತ್ರಿಯವರ ಪೈಲಟ್ ವಾಹನವು ಏಕಾಏಕಿ ಬ್ರೇಕ್ ಹಾಕಿದ್ದು, ರಸ್ತೆಗೆ ಅಡ್ಡಲಾಗಿ ಚಲಿಸುತ್ತಿದ್ದ ಸ್ಕೂಟರ್ ಪ್ರಯಾಣಿಕನೊಬ್ಬನನ್ನು ರಕ್ಷಿಸಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ.
ಐದು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಮುಖ್ಯಮಂತ್ರಿಯವರ ವಾಹನವಲ್ಲದೆ ಕಮಾಂಡೋ ವಾಹನ, ಎರಡು ಪೋಲೀಸ್ ವಾಹನಗಳು ಹಾಗೂ ಆ್ಯಂಬುಲೆನ್ಸ್ ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದವು. ಸಿಎಂ ವಾಹನಕ್ಕೂ ಹಿಂಬದಿ ವಾಹನ ಡಿಕ್ಕಿ ಹೊಡೆದಿದೆ. ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ವಾಹನ ಘಟನಾ ಸ್ಥಳದಲ್ಲಿ ಕೆಲಕಾಲ ನಿಂತ ನಂತರ ಮುಂದೆ ಚಲಿಸಿತು. ಇನ್ನುಳಿದ ನಾಲ್ಕು ವಾಹನಗಳನ್ನು ಸ್ಥಳದಲ್ಲಿಯೇ ಬಹಳ ಹೊತ್ತು ನಿಲ್ಲಿಸಿ ನಂತರ ಸ್ಥಳಾಂತರಿಸಲಾಯಿತು.