ಕಾಸರಗೋಡು: ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಚಿರತೆ ಸಂಚರಿಸುವುದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಳಿಯಾರಿನ ಕಾನತ್ತೂರು ಮುಡಯಂ ವೀಟ್ಟಿಲ್ ನಿವಾಸಿ ರಾಜೀವನ್ ಎಂಬವರ ಸಾಕು ನಾಯಿಯನ್ನು ಕಣ್ಣಮುಂದೆಯೇ ಚಿರತೆ ಹೊತೊಯ್ದಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ.
ಗೂಡಿನಲ್ಲಿ ಹಾಕಿ ಸಾಕುವ ನಾಯಿಯನ್ನು ಭಾನುವಾರ ಸಂಜೆ ವೇಳೆಗೆ ಗೂಡಿಂದ ಹೊರಬಿಡಲಾಗಿತ್ತು. ಹೊರ ಹೋಗಿದ್ದ ನಾಯಿಯನ್ನು ಕರೆದಾಗ ಚಿರತೆಯೊಂದು ನಾಯಿ ಮೇಲೆ ದಾಳಿ ನಡೆಸಿ ಹೊತ್ತೊಯ್ದಿರುವುದಾಗಿ ರಾಜೀವನ್ ತಿಳಿಸಿದ್ದಾರೆ. ಕಾನತ್ತೂರು ಅಲ್ಲದೆ, ಬೀಟಿಯಡ್ಕ, ನೆಯ್ಯಂಗಯ, ಕೊಟ್ಟಂಗುಳಿ, ಪಾನೂರು ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಸಾಕುನಾಯಿಗಳು ಹಾಗೂ ಜಾನುವಾರುಗಳು ನಾಪತ್ತೆಯಾಗುತ್ತಿರುವುದು ಸಾಮಾನ್ಯವಾಗಿದ್ದು, ಚಿರತೆ ಹೊತ್ತೊಯ್ಯುತ್ತಿರಬೇಕೆಂದು ಸಂಶಯಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಚಿರತೆ ಸಂಚಾರದ ಬಗ್ಗೆ ದೂರು ಲಭಿಸಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಿಸಿ ಕ್ಯಾಮರಾ ಅಳವಡಿಸಿದ್ದು, ಇದರಲ್ಲಿ ಚಿರತೆ ಸಂಚಾರದ ದೃಶ್ಯಾವಳಿ ಸೆರೆಯಾಗಿರುವುದರಿಂದ ಚಿರತೆ ಸಂಚಾರ ದೃಢಪಟ್ಟಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಚಿರತೆ ಸಂಚಾರದ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು, ಸಂಜೆ ಸಮಯದ ನಂತರ ಮನೆಯಿಂದ ಹೊರಬರಲೂ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ಸೆರೆಗೆ ಅರಣ್ಯಾಧಿಕಾರಿಗಳೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.