ತಿರುವನಂತಪುರಂ: ತ್ರಿಶೂರ್ ಪೂರಂಗೆ ಯಾವುದೇ ತೊಂದರೆ ಆಗಿಲ್ಲ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪೂರಂಗೆ ಅಡ್ಡಿಪಡಿಸುವ ಯತ್ನ ನಡೆದಿದೆಯೇ ಹೊರತು ಪೂರಂಗೆ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
ಸಿಡಿಮದ್ದು ಪ್ರದರ್ಶನಕ್ಕೆ ಮಾತ್ರ ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ವಿವರಿಸಿದೆ.
ಪೂರಂ ಸಂಪೂರ್ಣ ಕಗ್ಗಂಟಾಗಿದೆ ಎಂಬ ಹೇಳಿಕೆ ಉತ್ಪ್ರೇಕ್ಷಿತ ಪ್ರಚಾರವಾಗಿದೆ ಎಂದು ಮುಖ್ಯಮಂತ್ರಿಗಳ ಟಿಪ್ಪಣಿಯಲ್ಲಿ ಹೇಳಲಾಗಿದೆ. ಎಂದಿನಂತೆ ಈ ವಿಚಾರದಲ್ಲಿ ಸಂಘಪರಿವಾರವನ್ನೂ ದೂರಲಾಗಿದೆ. ಪೂರಂ ಆಚರಣೆಯಲ್ಲಿನ ಹಸ್ತಕ್ಷೇಪವನ್ನು ಪರಿಶೀಲಿಸಲಾಗುವುದು ಮತ್ತು ಅಧಿಕಾರಿ ಮಟ್ಟದಲ್ಲಿ ಅಪರಾಧ ಎಸಗಿದರೆ ಶಿಕ್ಷೆಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ವ್ಯಾಪಕ ಟೀಕೆಗಳ ಕೊನೆಯಲ್ಲಿ ಮುಖ್ಯಮಂತ್ರಿಯವರ ವಿವರಣೆ ಬಂದಿದೆ. ಸಿಡಿಮದ್ದು ಪ್ರದರ್ಶನದ ವಿಚಾರದಲ್ಲಿ ವಿವಾದ ಉಂಟಾಗಿದ್ದು, ಭದ್ರತಾ ವ್ಯವಸ್ಥೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಮುಖ್ಯಮಂತ್ರಿಗಳ ವಿವರಣೆಯಲ್ಲಿದೆ. ಜನರನ್ನು ಸ್ಥಳಾಂತರಿಸಲು ತೊಂದರೆಯಾಗಿತ್ತು. ದೀಪಗಳನ್ನು ಸ್ವಿಚ್ ಆಫ್ ಮಾಡುವಂತಹ ಕ್ರಮಗಳು ನಡೆದವು. ಇದರಿಂದ ಸಿಡಿಮದ್ದು ಪ್ರದರ್ಶನ ವಿಳಂಬವಾಯಿತು ಎಂದು ಹೇಳಲಾಗಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ದೇವಸ್ವಂಗಳು ಕೆಲವು ಆಚರಣೆಗಳನ್ನು ಮೊಟಕುಗೊಳಿಸಿದ್ದರು ಎನ್ನಲಾಗಿದೆ.