ನವದೆಹಲಿ: 'ಮಹಾತ್ಮ ಗಾಂಧಿ ಹಾಗೂ ವಿನೋಬಾ ಬಾವೆ ಅವರ 'ಭೂದಾನ' ಚಳಚಳಿಯ ಭಾಗವಾಗಿದ್ದ ಕಾಂಗ್ರೆಸ್ ಈಗ 'ಭೂಕಬಳಿಕೆ'ಯಲ್ಲಿ ನಿರತವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ 'ಸ್ಫೂರ್ತಿ' ಪಡೆದು ಕಾಂಗ್ರೆಸ್‌ನ ಎಲ್ಲ ನಾಯಕರು ಭೂಕಬಳಿಕೆಯಲ್ಲಿ ತೊಡಗಿಕೊಂಡಿದ್ದಾರೆ' ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ರಾಹುಲ್ ಖರ್ಗೆ ಅವರು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ 5 ನಿವೇಶನಗಳನ್ನು ಹಿಂತಿರುಗಿಸಿರುವ ಕುರಿತು ಹಾಗೂ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ಹಿಂದಿರುಗಿಸಿದ ಬಳಿಕ ಬಿಜೆಪಿ ಈ ಟೀಕೆ ಮಾಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, 'ನಿವೇಶನಗಳನ್ನು ಹಿಂತಿರುಗಿಸಿರುವುದು ಅಕ್ರಮ ನಡೆಸಿರುವುದನ್ನು ಬಹಿರಂಗ ಮಾಡುತ್ತದೆ. ಕಾನೂನು ಪ್ರಕ್ರಿಯೆಯಿಂದ ಆಗುವ ಅವಮಾನವನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆ. ಆದ್ದರಿಂದ ನೈತಿಕ ಹೊಣೆ ಹೊತ್ತು ಎಲ್ಲ ನಾಯಕರು ರಾಜೀನಾಮೆ ನೀಡಬೇಕು' ಎಂದು ತ್ರಿವೇದಿ ಒತ್ತಾಯಿಸಿದರು.