ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪಾಕಿಸ್ತಾನಿ-ಅಮೆರಿಕನ್ ಸದಸ್ಯರೊಂದಿಗಿನ ಸಂಬಂಧಗಳ ಬಗ್ಗೆ ಅಮೆರಿಕದ ಹಿಂದೂ ರಾಜಕೀಯ ಗುಂಪು ಪ್ರಶ್ನೆಗಳನ್ನು ಎತ್ತಿದೆ. ಇದು ಹೀಗೇ ಮುಂದುವರಿದರೆ, ಕಾಶ್ಮೀರದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಅವರ ಆಡಳಿತದ ನಿರ್ಧಾರವು ಯಾವ ದಿಕ್ಕಿನತ್ತ ಸಾಗಬಹುದು ಎಂಬ ಕಳವಳವನ್ನು ಅದು ವ್ಯಕ್ತಪಡಿಸಿದೆ,
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕದ ಆಯೋಗದ (ಯುಎಸ್‌ಸಿಐಆರ್‌ಎಫ್) ಪಾಕಿಸ್ತಾನಿ-ಅಮೆರಿಕನ್ ಸದಸ್ಯರೊಂದಿಗೆ ಕಮಲಾ ಹ್ಯಾರಿಸ್ ಅವರ ನಂಟನ್ನು ಅದು ಪ್ರಶ್ನಿಸಿದೆ.
2024ರ ಉದ್ದಕ್ಕೂ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶೇಷವಾಗಿ ಲೋಕಸಭೆ ಚುನಾವಣೆಯ ಹಿಂದಿನ ಮತ್ತು ನಂತರದ ಕೆಲ ತಿಂಗಳುಗಳಲ್ಲಿ ಅತ್ಯಂತ ಹದಗೆಟ್ಟಿತ್ತು ಎಂದು ಯುಎಸ್‌ಸಿಐಆರ್‌ಎಫ್ ಕಳೆದ ವಾರ ಬಿಡುಗಡೆ ಮಾಡಿದ್ದ 'ಇಂಡಿಯಾ ಕಂಟ್ರಿ ಅಪ್‌ಡೇಟ್' ವರದಿಯಲ್ಲಿ ಮಾಡಿದ್ದ ಆರೋಪವನ್ನು ಹಿಂದೂಸ್ ಫಾರ್ ಅಮೆರಿಕ ಫಸ್ಟ್ ಸಂಘಟನೆಯ ಸ್ಥಾಪಕ ಮತ್ತು ಅಧ್ಯಕ್ಷರಾದ ಉತ್ಸವ್ ಸಂದುಜಾ ಅವರು ಪ್ರಶ್ನಿಸಿದ್ದಾರೆ.
ಈ ವರದಿಯನ್ನು ದುರುದ್ದೇಷಪೂರಿತ ಎಂದು ಭಾರತ ತಳ್ಳಿ ಹಾಕಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಾಗಿರುವ ಸಂದುಜಾ, ಎಕ್ಸ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಮ್ಮ ಚುನಾವಣಾ ಪ್ರಚಾರವನ್ನು ಬೆಂಬಲಿಸಿದ್ದಕ್ಕಾಗಿ ಪಾಕಿಸ್ತಾನಿ ಅಮೆರಿಕನ್ ಮತ್ತು ಯುಎಸ್‌ಸಿಐಆರ್‌ಎಫ್‌ನ ಆಯುಕ್ತ ಆಸಿಫ್ ಮಹಮೂದ್ ಅವರನ್ನು ಕಮಲಾ ಹ್ಯಾರಿಸ್ ಹೊಗಳುತ್ತಿರುವುದನ್ನು ಕಾಣಬಹುದಾಗಿದೆ.
'ಹಲವು ವರ್ಷಗಳಿಂದ ಅವರು ನನ್ನನ್ನು ಬೆಂಬಲಿಸುತ್ತಿದ್ದಾರೆ. ನಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದಾಗ ನಾನು ಮಾಡಿದ ಮೊದಲ ಕರೆ ಅವರಿಗೇ ಆಗಿತ್ತು'ಎಂದು ಮಹಮೂದ್ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬ ವಿಡಿಯೊದಲ್ಲಿ ಹ್ಯಾರಿಸ್ ಹೇಳಿದ್ದಾರೆ.
ಉಪಾಧ್ಯಕ್ಷರ ಸಹೋದರಿ ಮಾಯಾ ಹ್ಯಾರಿಸ್ ಜೊತೆಗೆ ಕಮಲಾ ಹ್ಯಾರಿಸ್ ಅವರಿಗಾಗಿ ಚುನಾವಣಾ ನಿಧಿಸಂಗ್ರಹಣೆಯನ್ನು ಆಯೋಜಿಸುವುದಾಗಿ ಮಹಮೂದ್ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು.
ಮಹಮೂದ್ ಅವರು ಪಾಕಿಸ್ತಾನದ ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳೊಂದಿಗೆ ಗಾಢ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಭಾರತವನ್ನು ಟೀಕಿಸುವ ನಿಲುವುಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ.
'ಈ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಪಾಕಿಸ್ತಾನದ ಆದ್ಯತೆಯ ಆಯ್ಕೆಯಾಗಿದ್ದಾರೆ. ಭಾರತೀಯ ಅಮೆರಿಕನ್ನರೇ, ನಾವು ಇನ್ನೂ ಉತ್ತಮವಾದುದನ್ನು ಮಾಡಬಹುದು'ಎಂದು ಸಂದುಜಾ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಪಾಕಿಸ್ತಾನಿಗಳ ಜೊತೆಗಿನ ಈ ಸಂಬಂಧವು ಹ್ಯಾರಿಸ್ ಅವರ ಆಡಳಿತವು ಮುಂದೆ ಭಾರತದ ವಿಷಯವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಕಳವಳವನ್ನು ಉಂಟು ಮಾಡಿದೆ. ವಿಶೇಷವಾಗಿ, ಕಾಶ್ಮೀರದಂತಹ ಸೂಕ್ಷ್ಮ ವಿಷಯದ ಬಗ್ಗೆ ಕಳವಳವಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದಾಗಿ 'ಹಿಂದೂಸ್ ಫಾರ್ ಅಮೆರಿಕ ಫಸ್ಟ್'ಸಂಘಟನೆ ಕಳೆದ ತಿಂಗಳು ಘೋಷಿಸಿತ್ತು.