ನವದೆಹಲಿ: ಇದೇ ವರ್ಷದ ಆಗಸ್ಟ್ 11ರಂದು ನಡೆದ ನೀಟ್-ಪಿಜಿ ಪರೀಕ್ಷೆಯ ಆಯ್ಕೆ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಖಾತ್ರಿಪಡಿಸಿಕೊಳ್ಳಲು ಪ್ರಶ್ನೆಪತ್ರಿಕೆಗಳು ಮತ್ತು ಕೀ ಉತ್ತರಗಳಗಳನ್ನು ಬಹಿರಂಗಪಡಿಸುವಂತೆ ಕೋರಿರುವ ಅರ್ಜಿಗಳ ವಿವರವಾದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿರುವ ಪೀಠದ ಮುಂದೆ ವಿದ್ಯಾರ್ಥಿಗಳ ಪರ ವಕೀಲೆ ತನ್ವಿ ದುಬೆ, ಪರೀಕ್ಷೆಯನ್ನು ಯಾವ ರೀತಿ ನಡೆಸಲಾಯಿತು ಎಂಬುದರ ಪ್ರಮಾಣಿತ ಕಾರ್ಯಾಚರಣೆಯ ವಿಧಾನವೂ ಇಲ್ಲ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸಿಲ್ಲ. ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ರಾಜ್ಯಗಳು ಕೂಡ ಗೊಂದಲಕ್ಕೊಳಗಾಗಿವೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪರ ವಕೀಲರ ವಾದವನ್ನು ಆಲಿಸಿದ ಪೀಠವು, ಇದಕ್ಕೆ ಸಂಬಂಧಿಸಿದ ಅರ್ಜಿಗಳ ವಿವರವಾದ ವಿಚಾರಣೆ ನಡೆಸುವುದಾಗಿ ಹೇಳಿತು.
ನೀಟ್-ಪಿಜಿಯ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ಬಿಡುಗಡೆ ಮಾಡದಿರುವುದು ರಾಷ್ಟ್ರೀಯ ಪರೀಕ್ಷಾ ಮಂಡಳಿಯ (ಎನ್‌ಬಿಇ)ನಿರಂಕುಶ ಕ್ರಮವೆಂದಿದ್ದು, ಇದನ್ನು ವಕೀಲೆ ದುಬೆ ಅವರ ಮೂಲಕ ಸಲ್ಲಿಸಲಾದ ಅರ್ಜಿಗಳಲ್ಲಿ ಪ್ರಶ್ನಿಸಲಾಗಿದೆ.
ನಿರೀಕ್ಷಿತ ಮತ್ತು ನೈಜ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮರುಮೌಲ್ಯಮಾಪನ ಮತ್ತು ಮರುಪರಿಶೀಲನೆಗೆ ಯಾವುದೇ ಆಯ್ಕೆಗಳಿಲ್ಲದಂತಾಗಿದೆ ಎಂದೂ ಅರ್ಜಿಯಲ್ಲಿ ಆರೋಪಿಸಿದೆ.
ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಹಿರಿಯ ವಕೀಲೆ ವಿಭಾ ದತ್ತ ಮಖಿಜಾ ಅವರು, ಪರೀಕ್ಷೆಗೆ ಸಂಬಂಧಿಸಿ ಯಾವುದೇ ನಿಯಮ ಅಥವಾ ಸ್ಪಷ್ಟತೆ ಇಲ್ಲ. ಪರೀಕ್ಷೆಗೆ ಮೂರು ದಿನಗಳ ಮೊದಲು ಪರೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದೂ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಬಹಿರಂಗಪಡಿಸುವಂತೆ ಇಶಿಕಾ ಜೈನ್ ಮತ್ತು ಇತರರು ಮತ್ತೊಂದು ಅರ್ಜಿಯಲ್ಲಿ ಕೋರಿದ್ದಾರೆ.