HEALTH TIPS

ಹವಾಮಾನ ವೈಪರೀತ್ಯದಿಂದ ಕೌಟುಂಬಿಕ ಹಿಂಸಾಚಾರ ಹೆಚ್ಚಳ: ಸಂಶೋಧನೆ

 ವದೆಹಲಿ: ಪ್ರವಾಹ ಮತ್ತು ಭೂಕುಸಿತದಂತಹ ಹವಾಮಾನದ ಆಘಾತಗಳು ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಕೌಟುಂಬಿಕ ಹಿಂಸಾಚಾರ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಲಂಡನ್‌ನ ಸಂಶೋಧಕರು ತಿಳಿಸಿದ್ದಾರೆ. 1993 ಮತ್ತು 2019ರ ನಡುವೆ 156 ದೇಶಗಳ ಸಮೀಕ್ಷೆಯ ದತ್ತಾಂಶವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಲಂಡನ್ ವಿಶ್ವವಿದ್ಯಾಲಯದ ತಂಡವು ಈ ಸಂಶೋಧನೆ ನಡೆಸಿದ್ದು, ಪರಿಸರದ ಉಪಶಮನಕ್ಕೆ ಅಗತ್ಯವಿರುವ ಕ್ರಿಯಾಯೋಜನೆ ರೂಪಿಸುವಂತೆ ದೇಶಗಳಿಗೆ ಸೂಚನೆ ನೀಡಿದ್ದಾರೆ. ಹವಾಮಾನದ ಆಘಾತದ ಪರಿಣಾಮ ಸಂಕೀರ್ಣವಾಗಿದೆ. ನೀತಿ ನಿರೂಪಕರಿಗೆ ಇದು ಅರ್ಥವಾಗುವುದೇ ಸವಾಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು ಸಾಮಾನ್ಯವಾಗಿರುವ ಪಿತೃಪ್ರಧಾನ ದೇಶಗಳಲ್ಲಿ ಕೌಟುಂಬಿಕ ಹಿಂಸಾಚಾರ ತೀವ್ರವಾಗಿದೆ ಎಂದೂ ಅವರು ಹೇಳಿದ್ದಾರೆ

'ಪಿಎಲ್‌ಒಎಸ್ ಕ್ಲೈಮೆಟ್' ಜರ್ನಲ್‌ನಲ್ಲಿ ಈ ಸಂಶೋಧನೆಯ ಮಾಹಿತಿ ಪ್ರಕಟವಾಗಿದೆ. ಹವಾಮಾನದ ಆಘಾತಗಳು ಸಂಗಾತಿ ಜೊತೆಗಿನ ದೈಹಿಕ ಮತ್ತು ಲೈಂಗಿಕ ಸಂಬಂಧ ಹಾಗೂ ಕೌಟುಂಬಿಕ ಹಿಂಸಾಚಾರದ ರಾಷ್ಟ್ರೀಯ ದರ ಹೆಚ್ಚಳಕ್ಕೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಸಂಶೋಧನೆ ಮೊದಲ ಉದಾಹರಣೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹವಾಮಾನ ಆಘಾತಗಳು ಸಮಾಜದ ಮೇಲೆ ಬೀರುವ ಪರಿಣಾಮಕ್ಕೆ ಇದೊಂದು ಪುರಾವೆಯಾಗಿದೆ. ಈ ಸಂಬಂಧ ನೀತಿ ನಿರೂಪಣೆ ಮತ್ತು ಕ್ರಮಕ್ಕೆ ಇದು ದಾರಿಮಾಡಿಕೊಡುತ್ತದೆ ಎಂದಿದ್ದಾರೆ.

'ಹವಾಮಾನ ಬದಲಾವಣೆಯು ಕುಟುಂಬಗಳಲ್ಲಿ ಒತ್ತಡ ಮತ್ತು ಆಹಾರದ ಅಭದ್ರತೆಯನ್ನು ಸೃಷ್ಟಿಸುತ್ತಿದೆ. ಇದು ಹಿಂಸಾಚಾರಕ್ಕೆ ಎಡೆಮಾಡುತ್ತಿದೆ. ಹಿಂಸಾಚಾರ ತಡೆಗೆ ಲಭ್ಯವಿರುತ್ತಿದ್ದ ಪೊಲೀಸ್ ಮತ್ತು ಇತರ ಸೇವೆಗಳು ಹವಾಮಾನ ಆಘಾತಗಳ ನಿರ್ವಹಣೆಯತ್ತ ಹೆಚ್ಚು ಗಮನ ಕೇಂದ್ರೀಕರಿಸುವುದರಿಂದ ಕೌಟುಂಬಿಕ ಕಲಹ ತಡೆಗೆ ಅವರ ಸೇವೆ ಸಿಗದೆ ಇರಬಹುದು'ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಮುಖ್ಯ ಸಂಶೋಧಕ ಜೆನೆವೀವ್ ಮನ್ನೇಲಿ ತಿಳಿಸಿದ್ದಾರೆ.

ಈ ಹಿಂದಿನ ಅಧ್ಯಯನವೊಂದು ಹವಾಮಾನದಲ್ಲಿ ಶಾಖ ಮತ್ತು ಆರ್ದ್ರತೆ ಹೆಚ್ಚಳವು ಆಕ್ರಮಣಕಾರಿ ನಡವಳಿಕೆ ಹೆಚ್ಚಳಕ್ಕೆ ಎಡೆಮಾಡುತ್ತದೆ ಎಂದು ಹೇಳಿತ್ತು.

'ಹವಾಮಾನ ಬದಲಾವಣೆ ರಾಷ್ಟ್ರೀಯ ಹಂತದಲ್ಲಿ ಹೇಗೆ ಪರಿಣಾಮ ಬೀರುತ್ತಿದೆ? ಎಂಬುದನ್ನು ಅಧ್ಯಯನ ಮಾಡಿ ಅಂತರರಾಷ್ಟ್ರೀಯ ನೀತಿ ನಿರೂಪಕರಿಗೆ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿತ್ತು'ಎಂದು ಮನ್ನೇಲಿ ಹೇಳಿದ್ದಾರೆ.

1920ರಿಂದ 2024ರವರೆಗಿನ ಪ್ರವಾಹ, ಚಂಡಮಾರುತ, ಭೂಕುಸಿತ, ಅಧಿಕ ತಾಪಮಾನ, ಬರ, ಭೂಕಂಪ, ಜ್ವಾಲಾಮುಖಿ, ಕಾಳ್ಗಿಚ್ಚು ಮುಂತಾದ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನೂ ಸಂಶೋಧಕರು ತಮ್ಮ ವಿಶ್ಲೇಷಣೆ ವೇಳೆ ಪರಿಗಣಿಸಿದ್ದಾರೆ.

ಈ ಪೈಕಿ ಪ್ರವಾಹವು ಕೌಟುಂಬಿಕ ಹಿಂಸಾಚಾರದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ನಂತರದ ಸ್ಥಾನದಲ್ಲಿ ಬಿರುಗಾಳಿ ಮತ್ತು ಭೂಕುಸಿತಗಳಿವೆ. ಬಳಿಕ, ಭೂಕಂಪ, ಜ್ವಾಲಾಮುಖಿ ಮತ್ತು ಕಾಳ್ಗಿಚ್ಚು ಕೌಟುಂಬಿಕ ಹಿಂಸಾಚಾರ ಹೆಚ್ಚಳಕ್ಕೆ ಕಾರಣವಾಗಿವೆ.

'156 ದೇಶಗಳ ರಾಷ್ಟ್ರೀಯ ದತ್ತಾಂಶವು ಬಿರುಗಾಳಿ, ಭೂಕುಸಿತ ಮತ್ತು ಪ್ರವಾಹಗಳಂತಹ ಹವಾಮಾನ ವೈಪರೀತ್ಯಗಳು ಕೌಟುಂಬಿಕ ಹಿಂಸಾಚಾರ ಹೆಚ್ಚಳದಲ್ಲಿ ನಿಕಟ ಸಂಬಂಧ ಹೊಂದಿರುವುದನ್ನು ಸೂಚಿಸುತ್ತದೆ' ಎಂದು ತಜ್ಞರು ಉಲ್ಲೇಖಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries