ನವದೆಹಲಿ: '26 ಮಂದಿ ಖಾಲಿಸ್ತಾನಿ ಉಗ್ರರನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿದ್ದು, ಇದರಲ್ಲಿ ಐದು ಮಂದಿಯ ವಿಚಾರವನ್ನು ಕೆನಡಾವು ಇತ್ಯರ್ಥಗೊಳಿಸಿದೆ. ಉಳಿದವರ ವಿಚಾರ ತಿಳಿದುಬಂದಿಲ್ಲ. ಕೆನಡಾವು ಈ ವಿಚಾರದಲ್ಲಿ ನಿಷ್ಕ್ರಿಯವಾಗಿದೆ' ಎಂದು ಕೆನಡಾದಲ್ಲಿ ಭಾರತದ ಹೈ ಕಮೀಷನರ್ ಆಗಿದ್ದ ಸಂಜಯ್ ವರ್ಮಾ ತಿಳಿಸಿದ್ದಾರೆ.
ನವದೆಹಲಿಗೆ ಬಂದಿಳಿದ ಎರಡು ದಿನಗಳ ಬಳಿಕ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಐದು ಮಂದಿ ಉಗ್ರರನ್ನು ಹಸ್ತಾಂತರಿಸಲಾಗಿದೆ. ಅವರ ಹೆಸರು ಹಾಗೂ ಉಳಿದ ವಿವರಗಳನ್ನು ನೀಡಲು ನನಗೆ ಯಾವುದೇ ಸ್ವಾತಂತ್ರ್ಯವಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
'ನನಗೆ ಸಿಕ್ಕ ಕೊನೆಯ ಮಾಹಿತಿಯ ಪ್ರಕಾರ, ಐದು ಮಂದಿ ವಿಚಾರವನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ. 21 ಮಂದಿಯ ಹಸ್ತಾಂತರ ಪ್ರಕ್ರಿಯೆ ಇತ್ಯರ್ಥವಾಗಿಲ್ಲ. ದಶಕಗಳಿಂದ ಇದು ಹಾಗೆಯೇ ಉಳಿದಿದೆ. ಸಮಾಲೋಚನೆ ನಡೆಸುತ್ತಿದೆ ಎಂದು ಕೆನಡಾ ಹೇಳುತ್ತಿರುವುದು ಅದು ನಿಷ್ಕ್ರಿಯವಾಗಿದೆ ಎನ್ನುವುದನ್ನೇ ಹೇಳುತ್ತದೆ. ಈ ವಿಚಾರ ನ್ಯಾಯಾಲಯದ ವ್ಯಾಪ್ತಿಗೂ ಒಳಪಡುತ್ತದೆ. ಎರಡೂ ದೇಶಗಳ ನ್ಯಾಯಾಂಗ ವ್ಯವಸ್ಥೆ ಭಿನ್ನವಾಗಿರುವ ಕಾರಣ, ಕೆಲವೊಮ್ಮೆ ಸಮಾಲೋಚನೆ ನಡೆಸುವ ಅಗತ್ಯವಿದೆ' ಎಂದು ಸಂಜಯ್ ವರ್ಮಾ ಹೇಳಿದರು.
ಭಯೋತ್ಪಾದನೆ ಹಾಗೂ ಇನ್ನಿತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, 26 ಮಂದಿಯ ಹಸ್ತಾಂತರ ಪ್ರಕ್ರಿಯೆ ನಡೆಸುವಂತೆ ವಿದೇಶಾಂಗ ಸಚಿವಾಲಯವು ಕೆನಡಾಕ್ಕೆ ಮನವಿ ಮಾಡಿತ್ತು. ಪರಸ್ಪರ ಕಾನೂನು ನೆರವು ಒಪ್ಪಂದದ ಅಡಿಯಲ್ಲಿ ಹಲವು ಆರೋಪಿಗಳನ್ನು 'ತಾತ್ಕಾಲಿಕವಾಗಿ ಬಂಧನ'ಕ್ಕೆ ಒಳಪಡಿಸುವಂತೆ ಒತ್ತಾಯಿಸಿತ್ತು.
ಇದರಲ್ಲಿ ಗುರ್ಜೀತ್ ಸಿಂಗ್, ಗುರ್ಜೀಂದರ್ ಸಿಂಗ್, ಗುರ್ಪೀತ್ ಸಿಂಗ್, ಲಕ್ಬೀರ್ ಸಿಂಗ್ ಲಂಡಾ, ಅರ್ಶ್‌ದೀಪ್ ಸಿಂಗ್ ಗಿಲ್ ಹೆಸರುಗಳೂ ಸೇರಿದ್ದವು. ನಿಜ್ಜರ್‌ನನ್ನು 'ಘೋಷಿತ ಭಯೋತ್ಪಾದಕ' ಎಂದು ಭಾರತ ತಿಳಿಸಿತ್ತು. 2023ರ ಜೂನ್ 18ರಂದು ಸುರ್ರೆ ಪಟ್ಟಣದ ಗುರುದ್ವಾರದ ಹೊರಭಾಗದಲ್ಲಿ ನಿಜ್ಜರ್‌ನನ್ನು ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು.
ನಿಲುವು ಸ್ಪಷ್ಟ: 'ಕೆನಡಾದ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಖಾಲಿಸ್ತಾನಿ ಭಯೋತ್ಪಾದಕರು ಹಾಗೂ ಇತರೆ ಭಯೋತ್ಪಾದಕರು ಕೆನಡಾದಲ್ಲಿ ಸಕ್ರಿಯವಾಗಿರುವ ಕುರಿತು ಹಲವು ಸಲ ಗಮನಕ್ಕೆ ತರಲಾಗಿದೆ. ಅವರು ಭಾರತದ ಸಾರ್ವಭೌಮತೆ ಹಾಗೂ ದೇಶದ ಸಮಗ್ರತೆಗೆ ಸವಾಲು ಹಾಕುತ್ತಿದ್ದಾರೆ' ಎಂದು ತಿಳಿಸಿದರು.
'ಕೆನಡಾದಲ್ಲಿರುವ ಖಾಲಿಸ್ತಾನಿಗಳು ಕೆನಡಾದ ನಾಗರಿಕರು, ಅವರು ಭಾರತದ ಪ್ರಜೆಗಳಲ್ಲ. ಹಾಗಿದ್ದರೆ ಭಾರತದ ಭವಿಷ್ಯವೇನು ಎಂಬುದನ್ನು ಭಾರತವೇ ನಿರ್ಧರಿಸಬೇಕು. ವಿದೇಶಿಯರು ಇದನ್ನು ನಿಯಂತ್ರಿಸುವಂತಿಲ್ಲ. ನಮ್ಮ ಆಂತರಿಕ ವಿಚಾರದಲ್ಲಿ ಯಾರೂ ಕೂಡ ಮಧ್ಯ ಪ್ರವೇಶಿಸಬಾರದು' ಎಂದು ವರ್ಮಾ ಸ್ಪಷ್ಟಪಡಿಸಿದರು.
ಸಂಜಯ್ ವರ್ಮಾ ಕೆನಡಾದ ಭಾರತದ ಹೈ ಕಮಿಷನರ್ ಎರಡು ರಾಷ್ಟ್ರಗಳ ನಡುವಿನ ಸಂಬಂಧವು ಸುಧಾರಣೆಯಾಗಬೇಕು. ಇಬ್ಬರು ಪರಸ್ಪರ ಗೌರವ ಪ್ರಮುಖ ಕಾಳಜಿಯ ವಿಚಾರದಲ್ಲಿ ಎರಡು ರಾಷ್ಟ್ರಗಳು ಅರ್ಥೈಸಿಕೊಂಡರೆ ಮಾತ್ರ ಸಾಧ್ಯ'ಕೆನಡಾಕ್ಕೆ ಮಕ್ಕಳನ್ನು ಕಳುಹಿಸುವ ಎರಡು ಬಾರಿ ಚಿಂತಿಸಿ...'
ನವದೆಹಲಿ: 'ಭಾರತೀಯರೇ.. ಕೆನಡಾದಲ್ಲಿ ನಿಮ್ಮ ಮಕ್ಕಳು ಓದಲು ಕಳುಹಿಸುವ ಮುನ್ನ ಎರಡು ಬಾರಿ ಆಲೋಚಿಸಿ. ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಉದ್ಯೋಗದ ಖಾತ್ರಿ ಇಲ್ಲದ ಕೆಳದರ್ಜೆಯ ಕಾಲೇಜಿಗೆ ಸೇರುವ ಮಕ್ಕಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ..' - ಕೆನಡಾದಲ್ಲಿ ಭಾರತದ ಹೈ ಕಮೀಷನರ್ ಆಗಿದ್ದ ಸಂಜಯ್ ವರ್ಮಾ ನೀಡಿದ ಎಚ್ಚರಿಕೆಯಿದು. 'ಒಂದು ಸಮಯದಲ್ಲಿ ಪ್ರತಿ ವಾರ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಮೃತದೇಹವನ್ನು ಭಾರತಕ್ಕೆ ಕಳುಹಿಸಲಾಗುತ್ತಿತ್ತು. ವೈಫಲ್ಯಕ್ಕೊಳಗಾದ ಬಳಿಕ ಮಕ್ಕಳು ಹೆತ್ತವರನ್ನು ಎದುರಿಸುವ ಬದಲು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ. 2022ರಿಂದಲೂ ರಾಯಭಾರಿಯಾಗಿದ್ದ ವರ್ಮಾ ಅವರನ್ನು ಖಾಲಿಸ್ತಾನಿ ವಿವಾದದ ಬಳಿಕ ಈ ತಿಂಗಳ ಆರಂಭದಲ್ಲಿ ಕೆನಡಾವು ಭಾರತಕ್ಕೆ ಕಳುಹಿಸಿತ್ತು. 'ಕೆನಡಾ-ಭಾರತದ ಸಂಬಂಧ ಸುಧಾರಣೆಯಾದರೂ ಒಬ್ಬ ತಂದೆಯಾಗಿ ಸಲಹೆ ನೀಡುವುದು ಏನೆಂದರೆ ತಮ್ಮ ಕನಸುಗಳ ಸಾಕಾರಕ್ಕಾಗಿ ಮಕ್ಕಳು ಅಲ್ಲಿಗೆ ತೆರಳಿದರೆ ಬ್ಯಾಗ್‌ನಲ್ಲಿ ಮೃತದೇಹವಾಗಿ ಸ್ವದೇಶಕ್ಕೆ ಮರಳುತ್ತಾರೆ. ಹೀಗಾಗಿ ಅಲ್ಲಿಗೆ ಕಳುಹಿಸುವ ಮುನ್ನ ಹೆತ್ತವರು ಅಲ್ಲಿನ ಕಾಲೇಜುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕು' ಎಂದು ಸಲಹೆ ನೀಡಿದ್ದಾರೆ. ಸಂಸತ್ತಿನಲ್ಲಿ ಭಾರತ ಸರ್ಕಾರವು ಬಹಿರಂಗಪಡಿಸಿದ ಅಂಕಿಅಂಶದ ಪ್ರಕಾರ ಕೆನಡಾದಲ್ಲಿ ಈ ವರ್ಷ 4.27 ಲಕ್ಷ ಮಂದಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.