ತಿರುವನಂತಪುರಂ: ಭಕ್ತರ ಹಿತಾಸಕ್ತಿ ಕಾಪಾಡಲು ರಚನೆಯಾಗಿರುವ ತಿರುವಾಂಕೂರು ದೇವಸ್ವಂ ಮಂಡಳಿ ಆಗಾಗ್ಗೆ ಭಕ್ತರ ಹಿತಾಸಕ್ತಿ ವಿರುದ್ಧ ನಿಲುವು ತಾಳುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ನಿಲ್ಲಿಸುವ ದೇವಸ್ವಂ ಮಂಡಳಿಯ ನಿರ್ಧಾರದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
"ಆನ್‍ಲೈನ್‍ನಲ್ಲಿ ಮಾತ್ರ ಬುಕ್ ಮಾಡುವ ಮೂಲಕ ಶಬರಿಮಲೆಗೆ ಭೇಟಿ ನೀಡುವುದು ಪ್ರಾಯೋಗಿಕವಲ್ಲ" ಎಂದು ಅವರು ಎಕ್ಸ್‍ನಲ್ಲಿ ಬರೆದುಕೊಂಡಿದ್ದಾರೆ.
ಹೊರ ರಾಜ್ಯಗಳು ಸೇರಿದಂತೆ ದೂರದ ಪ್ರಯಾಣ ಮಾಡುವವರಿಗೆ ನಿಗದಿತ ಸಮಯಕ್ಕೆ ಶಬರಿಮಲೆ ತಲುಪಲು ಸಾಧ್ಯವಾಗುತ್ತಿಲ್ಲ. ಸಂಪ್ರದಾಯದಂತೆ ಕಾಲ್ನಡಿಗೆಯಲ್ಲಿ ಅಯ್ಯಪ್ಪದರ್ಶನಕ್ಕೆ ಬರುವ ಭಕ್ತರಿಗೂ ಇದೇ ಪರಿಸ್ಥಿತಿಯಿದೆ. ಸ್ಪಾಟ್ ಬುಕ್ಕಿಂಗ್ ತಪ್ಪಿಸುವುದು ಇಂತಹ ಸಾವಿರಾರು ಭಕ್ತರಿಗೆ ಸ್ವಾಮಿಯ ದರ್ಶನ ಪಡೆಯುವ ಅವಕಾಶವನ್ನು ನಿರಾಕರಿಸಿದಂತಾಗುತ್ತದೆ. ಆದ್ದರಿಂದ ಹಿಂದಿನ ವರ್ಷಗಳಂತೆ ಆನ್‍ಲೈನ್ ಜೊತೆಗೆ ಭಕ್ತಾದಿಗಳಿಗೆ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿ ಸಿದ್ಧವಾಗಬೇಕು ಎಂದು ರಾಜೀವ್ ಚಂದ್ರಶೇಖರ್ ವಿನಂತಿಸಿದ್ದಾರೆ.
“ಮಹಿಳೆಯರ ಪ್ರವೇಶದಿಂದಲೂ ಶಬರಿಮಲೆಗೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಅನಗತ್ಯ ವಿವಾದಗಳನ್ನು ಸೃಷ್ಟಿಸಿ ಯಾತ್ರೆಯನ್ನು ಕಷ್ಟಕರವಾಗಿಸಿದೆ. ಇದು ಉದ್ದೇಶಪೂರ್ವಕವೇ ಎಂಬ ಅನುಮಾನವೂ ಇದೆ,'' ಎಂದರು. ದರ್ಶನವನ್ನು ನಿರ್ಬಂಧಿಸುವುದು ಆರಾಧನಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಎಂಬುದನ್ನು ಮಂಡಳಿ ಮತ್ತು ಸರ್ಕಾರ ಗುರುತಿಸಬೇಕು. ಆದ್ದರಿಂದ ಈ ವಿಷಯದಲ್ಲಿ ಸ್ಪಾಟ್ ಬುಕ್ಕಿಂಗ್ ತಪ್ಪಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದವರು ತಿಳಿಸಿರುವರು.
ದೇವಸ್ವಂ ಮಂಡಳಿ ಮುಂದೆ ನಿಂತು ಭಕ್ತರ ಹಿತ ಕಾಪಾಡಬೇಕು. ಆದರೆ ಅದು ನಡೆಯುತ್ತಿಲ್ಲ, ಮಾತ್ರವಲ್ಲ, ಆಗಾಗ್ಗೆ ತಿರುವಾಂಕೂರು ಮಂಡಳಿ ಮತ್ತು ರಾಜ್ಯ ಸರ್ಕಾರದ ಧೋರಣೆ ಭಕ್ತರ ಆಶಯಕ್ಕೆ ವಿರುದ್ಧವಾಗಿರುತ್ತದೆ. ಇದನ್ನು ತಪ್ಪಿಸಬೇಕು ಎಂದಿರುವÀರು.