ಕಾಸರಗೋಡು: ಶ್ರೇಷ್ಠ ಸಂಸ್ಕøತಿ, ಧಾರ್ಮಿಕ ಆಚರಣೆಗಳು, ಪದ್ಧತಿ ಮತ್ತು ಸಂಪ್ರದಾಯಗಳನ್ನು ಚಾಚು ತಪ್ಪದೆ ಪಾಲಿಸುತ್ತಾ, ಇವುಗಳ ಮೌಲ್ಯಗಳನ್ನು, ಮಹತ್ವಗಳನ್ನು ಮಕ್ಕಳಿಗೆ ತಿಳಿಹೇಳುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ. ಸಂಸ್ಕøತಿ ಮಹತ್ವವನ್ನು, ಮೌಲ್ಯಗಳನ್ನು ಮಕ್ಕಳಿಗೆ ದಾಟಿಸುವ ಕೆಲಸ ಮನೆಯಿಂದಲೇ ಆರಂಭವಾಗಬೇಕೆಂದು ಕಾರ್ಕಳ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಗುರು ಪ್ರಸಾದ್ ರಾವ್ ಹೇಳಿದರು.
ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಸಭಾ ಭವನದಲ್ಲಿ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಆಯೋಜಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯ ಪ್ರಾಧ್ಯಾಪಕ ಹರೀಶ್ ನುಳ್ಳಿಪ್ಪಾಡಿ ಮಾತನಾಡಿ ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ ಶುಭಹಾರೈಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಕೋಶಾಧಿಕಾರಿ ಸತೀಶ್ ಮಾಸ್ತರ್ ಕೂಡ್ಲು, ಜಿಲ್ಲಾ ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಸಂಚಾಲಕ ಚಂದ್ರಶೇಖರ ಮಾಸ್ತರ್ ವರದಿ ವಾಚಿಸಿ, ಸ್ವಾಗತಿಸಿದರು. ಚಂಚಲಾಕ್ಷಿ ಬೀರಂತಬೈಲು ನಿರೂಪಿಸಿದರು. ಸತೀಶ್ ಕುಮಾರ್ ದೋಣಿಬಾಗಿಲು ವಂದಿಸಿದರು.
ಕಾರ್ಯಕ್ರಮದಲ್ಲಿ 36 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಿಸಲಾಯಿತು.