ಪೆರ್ಲ: ಕಲೆಗೆ ನೀಡುವ ನಿಸ್ವಾರ್ಥ ಸೇವೆ, ಮಹತ್ತರವಾದ ಸಾಧನೆಗೆ ಹಾದಿ ಮಾಡಿಕೊಡುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾಗಿರುವ 'ತೆಂಕಬೈಲು ಸ್ಮøತಿ ಭವನ'ಲೋಕಾರ್ಪಣೆ ನಡೆಸಿ ಆಶೀರ್ವಚನ ನೀಡಿದರು. ತಮ್ಮಲ್ಲಿನ ಕಲಾಗಾರಿಕೆಯನ್ನು ಪ್ರದರ್ಶನಕ್ಕೆ ಸೀಮಿತವಾಗಿರಿಸದೆ, ಗುರುಸ್ಥಾನದಲ್ಲಿ ನಿಂತು ಇನ್ನೊಬ್ಬರಿಗೆ ಹಂಚುವ ಮಹತ್ವದ ಯೋಗದಾನ ನೀಡಿರುವ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಅವರ ಕಾರ್ಯ ಶ್ಲಾಘನೀಯವಾದುದು. ರಾಮಭಟ್ ಅವರ ಇಚ್ಛಾಶಕ್ತಿ ಹಾಗೂ ಸೇವಾ ತತ್ಪರತೆ ಕೇಂದ್ರದಲ್ಲಿನ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಾಜ್ವಲ್ಯಮಾನವಾಘಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇಳಗಳಿಗೆ ಪ್ರಬುದ್ಧ ಕಲಾವಿದರನ್ನು ಪೂರೈಸುವ ಕೆಲಸ ಇಂದು ಸವಾಲಾಗಿ ಪರಿಣಮಿಸುತ್ತಿದೆ. ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಸಿಕೊಡುವ ಕೇಂದ್ರಗಳಿಂದ ಹೊರಬರುವ ಕಲಾವಿದರಿಗೆ ಎಲ್ಲಾ ಕಡೆ ಮನ್ನಣೆ ಲಭಿಸುತ್ತದೆ. ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಕಲಾವಿದರಿಗೆ ಎಂದಿಗೂ ಈ ವಿಶೇಷ ಗೌರವ ಪ್ರಾಪ್ತಿಯಾಗುತ್ತಿದೆ. ಕೇಂದ್ರದ ಸುಸಜ್ಜಿತ ಸಭಾಂಗಣ ನಿರ್ಮಾಣದ ಕನಸು ಶೀಘ್ರ ನನಸಾಗಲಿ ಎಂದು ತಿಳಿಸಿದರು. ತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೂಲ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದಲ್ಲಿ, ಭದ್ರಬುನಾದಿಯಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಪರಂಪರೆಯ ಯಕ್ಷಗಾನಕ್ಕೆ ನೇತೃತ್ವ ನೀಡುವಲ್ಲಿ ಪೆರ್ಲದ ಕೇಂದ್ರ ಮುಂಚೂಣಿಯಲ್ಲಿರುವುದಾಗಿ ತಿಳಿಸಿದರು.
ಹಿರಿಯ ವಕೀಲ ಎಂ. ನಾರಾಯಣ ಭಟ್, ಶ್ರೀ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಬೈರಿಕಟ್ಟೆ ಶ್ರೀಭದ್ರಕಾಳಿ ಕೊರಗಜ್ಜ ಸಾನ್ನಿಧ್ಯದ ಅಶೋಕ್ ಪಂಡಿತ್, ಕೇಂದ್ರದ ಭಾಗವತಿಕೆ ಗುರು ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರದ ಸಂಚಾಲಕ ಹಾಗೂ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೇಂದ್ರದ ಗೌರವಾಧ್ಯಕ್ಷ ಎನ್.ಕೆ ರಾಮಚಂದ್ರ ಭಟ್ ಪನೆಯಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು.