HEALTH TIPS

ಲೆಬನಾನ್-ಸಿರಿಯಾ ಮುಖ್ಯ ಗಡಿ ಬಂದ್

         ಬೈರೂತ್ : ಲೆಬನಾನ್‌ ರಾಜಧಾನಿ ಬೈರೂತ್‌ ಮೇಲೆ ಸರಣಿ ವಾಯುದಾಳಿ ನಡೆಸಿರುವ ಇಸ್ರೇಲ್ ಸೇನೆ, ಲೆಬನಾನ್‌ ಮತ್ತು ಸಿರಿಯಾ ಗಡಿಯಲ್ಲಿ ಸಂಪರ್ಕ ಕಡಿದು ಹಾಕಿದೆ.

          ಮುಖ್ಯ ಗಡಿ ಬಂದ್‌ ಆಗಿದ್ದರಿಂದ ಇಸ್ರೇಲ್‌ ದಾಳಿ ಆರಂಭವಾದ ನಂತರ ಸಿರಿಯಾ ಕಡೆಗೆ ತೆರಳುತ್ತಿದ್ದ ಸಾವಿರಾರು ಜನರ ವಲಸೆಗೆ ತೊಡಕಾಗಿದೆ.

         ದಾಳಿಯಿಂದಾಗಿ ರಾಜಧಾನಿಯಲ್ಲಿ ಕಟ್ಟಡ ನೆಲಸಮಗೊಂಡಿದೆ. ಪ್ರಾಣಹಾನಿ ವಿವರ ತಿಳಿದುಬಂದಿಲ್ಲ.

          ಬೈರೂತ್‌ನಲ್ಲಿ ಹಿಜ್ಬುಲ್ಲಾ ಸಂಘಟನೆಯ ಕೇಂದ್ರ ಗುಪ್ತದಳದ ಮುಖ್ಯ ಕಚೇರಿ ಗುರಿಯಾಗಿಸಿ ದಾಳಿ ನಡೆಯಿತು. 24 ಗಂಟೆಗಳಲ್ಲಿ ಈ ಭಾಗದಲ್ಲಿ ನೆಲೆಯೂರಿದ್ದ 100ಕ್ಕೂ ಹೆಚ್ಚು ಹಿಜ್ಬುಲ್ಲಾ ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ಪ್ರಕಟಿಸಿದೆ.


            ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ಪ್ರಕಾರ, ರಾಜಧಾನಿ ಮೇಲೆ ಸತತ 10 ಬಾರಿ ವಾಯುದಾಳಿಯಾಗಿದೆ. ಹಿಜ್ಬುಲ್ಲಾ ಬಂಡುಕೋರರು, ಜನರು ಸೇರಿ ಸುಮಾರು 1400 ಲೆಬೆನಿಯನ್ನರು ಸತ್ತಿದ್ದಾರೆ. ಅಂದಾಜು 12 ಲಕ್ಷ ಜನರು ಮನೆ ತೊರೆದಿದ್ದಾರೆ.

         ದಾಳಿಯಲ್ಲಿ ಹಿಜ್ಬುಲ್ಲಾ ಸಂವಹನ ವಿಭಾಗದ ಮುಖ್ಯಸ್ಥ ಮೊಹಮ್ಮದ್ ರಶೀದ್ ಸ್ಕಫಿ ಹತ್ಯೆಯಾಗಿದೆ. ಈತ 2000ರಿಂದ ಈ ಘಟಕದ ಮುಖ್ಯಸ್ಥನಾಗಿದ್ದ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ.

ಪ್ರತೀಕಾರವಾಗಿ ಹಿಜ್ಬುಲ್ಲಾದ ಬಂಡುಕೋರರು ಇಸ್ರೇಲ್‌ನತ್ತ ಸುಮಾರು 100 ರಾಕೆಟ್‌ಗಳನ್ನು ಪ್ರಯೋಗಿಸಿದ್ದಾರೆ ಎಂದು ಸೇನೆ ತಿಳಿಸಿದೆ. ಆದರೆ, ಇಸ್ರೇಲ್‌ನಲ್ಲಿ ಇದರಿಂದ ಆಗಿರುವ ಹಾನಿಯ ವಿವರವನ್ನು ನೀಡಿಲ್ಲ.

        ಅಲ್ಲದೆ, ಇನ್ನೊಂದೆಡೆ ಗಾಜಾದಲ್ಲಿರುವ ಹಮಾಸ್ ಬಂಡುಕೋರರು ಶುಕ್ರವಾರ ಇಸ್ರೇಲ್‌ನತ್ತ ಎರಡು ರಾಕೆಟ್‌ ಪ್ರಯೋಗಿಸಿದ್ದಾರೆ. ಈ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಈ ವಲಯದಿಂದ ರಾಕೆಟ್ ದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.

             ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆಯು ದಾಳಿ ಆರಂಭಿಸಿದ ಬಳಿಕ ಇದುವರೆಗೂ ಶೇ 87ರಷ್ಟು ಶಾಲಾ ಕಟ್ಟಡಗಳ ಮೇಲೆ ನೇರ ದಾಳಿ ನಡೆದಿದ್ದು, ತೀವ್ರ ಸ್ವರೂಪದ ಹಾನಿಯಾಗಿದೆ ಎಂದು ಆಸ್ತಿ ನಷ್ಟದ ಅಂದಾಜು ಮಾಡಿರುವ ಯುನಿಸೆಫ್ ಪ್ರಕಟಿಸಿದೆ.

 ಇಸ್ರೇಲ್‌ ಸೇನೆ ದಾಳಿಯಿಂದಾಗಿ ಲೆಬನಾನ್‌ ರಾಜಧಾನಿ ಬೈರೂತ್‌ ನಗರದ ದಕ್ಷಿಣ ಭಾಗದಲ್ಲಿ ವಸತಿ ಸಂಕೀರ್ಣವೊಂದು ಭಾಗಶಃ ಧ್ವಂಸಗೊಂಡಿರುವುದು -ಎಎಫ್‌ಪಿ ಚಿತ್ರ

ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್‌ ದಾಳಿ

ಜೆರುಸಲೇಂ: ಲೆಬನಾನ್‌ನ ಉತ್ತರ ಭಾಗದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸಿದ್ದು ಹಮಾಸ್ ಅಧಿಕಾರಿ ಸಯೀದ್‌ ಆತಲ್ಲಾಹ ಅಲಿ ಮತ್ತು ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ ಎಂದು ಹಮಾಸ್‌ ಶನಿವಾರ ತಿಳಿಸಿದೆ. ಬೆದ್ದಾವಿಯಲ್ಲಿ ಇರುವ ನಿರಾಶ್ರಿತ ಶಿಬಿರದ ದಾಳಿ ನಡೆಸಿದೆ. ಸಯೀದ್‌ ಅವರ ಪತ್ನಿ ಶ್ಯಾಮಾ ಅಜಂ ಮತ್ತು ಇಬ್ಬರು ಪುತ್ರಿಯರು ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ. 97 ಮಂದಿ ಸ್ಥಳಾಂತರ: ಲೆಬನಾನ್‌ನಿಂದ 97 ಮಂದಿಯನ್ನು ಕರೆತಂದ ಸೇನಾ ವಿಮಾನ ದಕ್ಷಿಣ ಕೊರಿಯಾಗೆ ಬಂದಿಳಿಯಿತು. ದೇಶದ ಇನ್ನೂ 30 ಪ್ರಜೆಗಳು ಲೆಬನಾನ್‌ನಲ್ಲಿ ಉಳಿದಿದ್ದಾರೆ ಎಂದು ದಕ್ಷಿಣ ಕೊರಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ಸಂಘರ್ಷಪೀಡಿತ ಪ್ರದೇಶದಿಂದ ದೇಶದ ಪ್ರಜೆಗಳನ್ನು ಕರೆತರಲು ಅಧ್ಯಕ್ಷ ಯೂನ್ ಸುಕ್‌ ಯೊಲ್ ಬುಧವಾರ ಸೂಚಿಸಿದ್ದರು.

ಅಧ್ಯಕ್ಷ ಚುನಾವಣೆಗೆ ಪ್ರಭಾವ ಬೀರಲು ಶಾಂತಿ ಒಪ್ಪಂದ ವಿಳಂಬ -ಬೈಡನ್‌

ವಾಷಿಂಗ್ಟನ್‌ : 'ಅಮೆರಿಕ ಅಧ್ಯಕ್ಷ ಚುನಾವಣೆಯ ಮೇಲೆ ಪ್ರಭಾವ ಬೀರಲೆಂದೇ ಶಾಂತಿ ಒಪ್ಪಂದವನ್ನು ಇಸ್ರೇಲ್‌ ತಡೆ ಹಿಡಿದಿದೆಯೇ ಎಂದು ಗೊತ್ತಿಲ್ಲ' ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಶನಿವಾರ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಸೆನೆಟರ್‌ ಕ್ರಿಸ್‌ ಮುರ್ಫಿ ಹೇಳಿಕೆಗೆ ಪ್ರತಿಕ್ರಿಯಿಸಿದರು. 'ಇಸ್ರೇಲ್‌ಗೆ ನನ್ನ ನೇತೃತ್ವದ ಸರ್ಕಾರ ಮಾಡಿದ್ದಿಂದಲೂ ಹೆಚ್ಚಿನ ಸಹಾಯ ಯಾರೂ ಮಾಡಲು ಸಾಧ್ಯವಿಲ್ಲ. ಬೆಂಜಮಿನ್‌ ಇದನ್ನು ಸ್ಮರಿಸಬೇಕು' ಎಂದು ಪ್ರತಿಪಾದಿಸಿದರು. ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ಅಮೆರಿಕ ಆಗ್ರಹಕ್ಕೆ ಇಸ್ರೇಲ್‌ ಸರ್ಕಾರ ಸ್ಪಂದಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries