ಮುಂಬೈ: ಹತ್ಯೆಯಾದ ಬಾಬಾ ಸಿದ್ದೀಕಿ ಹಾಗೂ ಅವರ ಪುತ್ರ, ಕಾಂಗ್ರೆಸ್ ಶಾಸಕ ಜೀಶನ್ ಅವರಿಗೆ ಕೆಲವು ದಿನಗಳ ಹಿಂದೆಯೇ ಬೆದರಿಕೆ ಇತ್ತು ಎಂದು 'ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂಬೈ: ಹತ್ಯೆಯಾದ ಬಾಬಾ ಸಿದ್ದೀಕಿ ಹಾಗೂ ಅವರ ಪುತ್ರ, ಕಾಂಗ್ರೆಸ್ ಶಾಸಕ ಜೀಶನ್ ಅವರಿಗೆ ಕೆಲವು ದಿನಗಳ ಹಿಂದೆಯೇ ಬೆದರಿಕೆ ಇತ್ತು ಎಂದು 'ಎಎನ್‌ಐ' ಸುದ್ದಿಸಂಸ್ಥೆ ವರದಿ ಮಾಡಿದೆ.
'ಜೀಶನ್ ಹಾಗೂ ಬಾಬಾ ಇಬ್ಬರೂ ನಮ್ಮ ಗುರಿಯಾಗಿದ್ದರು. ಇಬ್ಬರಲ್ಲಿ ಯಾರೇ ಕಂಡರೂ ಗುಂಡು ಹಾರಿಸುವಂತೆ ಆದೇಶವಿತ್ತು' ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಉಲ್ಲೇಖಿಸಿದೆ.
ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಸಿದ್ದೀಕಿ ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಜೀಶನ್ ಅವರ ಕಚೇರಿಯಿಂದ ಹೊರಗೆ ಬಂದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.
ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು.
ಪ್ರಕರಣ ಸಂಬಂಧ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಶಿವ ಗೌತಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಸ್ಥಳೀಯ ನ್ಯಾಯಾಲಯವು ಬಂಧಿತರ ಪೈಕಿ ಗುರ್ಮೈಲ್ ಎಂಬಾತನನ್ನು ಅಕ್ಟೋಬರ್ 21ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 18 ವರ್ಷ ತುಂಬಿಲ್ಲದ ಕಾರಣ ತಾನು ಬಾಲಕ ಎಂದು ಹೇಳಿಕೊಂಡಿರುವ ಧರ್ಮರಾಜ್‌ನ ವಯಸ್ಸು ಪತ್ತೆ ಹಚ್ಚಲು ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.