ನವದೆಹಲಿ: ಕಳೆದ ಎರಡು ದಿನಗಳಿಂದ ಹಲವು ದೇಶೀಯ ಮತ್ತು ವಿದೇಶಿ ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇಂದು(ಬುಧವಾರ) ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 180 ಪ್ರಯಾಣಿಕರಿದ್ದ ಆಕಾಶ ಏರ್ ವಿಮಾನ ಹುಸಿಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಮತ್ತೆ ದೆಹಲಿಗೆ ಹಿಂದಿರುಗಿದೆ.
ಈ ತಿಂಗಳು 7 ವಿಮಾನಗಳಿಗೆ ಬಂದಿರುವ ಹುಸಿಬಾಂಬ್ ಬೆದರಿಕೆ ಕುರಿತಂತೆ ಏರ್‌ಪೋರ್ಟ್ ಪೊಲೀಸರು ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಕೂಲಂಕಷ ತನಿಖೆ ಬಳಿಕ ಎಲ್ಲವೂ ಹುಸಿಕರೆ ಎಂದು ದೃಢಪಟ್ಟಿದೆ ಎಂದು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(ಐಜಿಐ) ಡಿಸಿಪಿ ಉಷಾ ರಂಗ್ನಾನಿ ಹೇಳಿದ್ದಾರೆ.
'ಈ ಹುಸಿ ಕರೆ ಮಾಡಿದವರ ವಿರುದ್ಧ ಕಾನೂನು ಕ್ರಮ, ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ'ಎಂದೂ ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ವಿವಿಧ ವಿಮಾನಗಳಿಗೆ ಬೆದರಿಕೆಗಳು ಬಂದಿದ್ದರಿಂದ ಐಜಿಐ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹುಸಿ ಬಾಂಬ್ ಕರೆ ಬಂಧಿರುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಅವರ ಪತ್ತೆಗೆ ಶೋಧ ಆರಂಭಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಭಾರತದ ಡಜನ್‌ನಷ್ಟು ದೇಶೀಯ, ವಿದೇಶಿ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಆದರೆ, ವಿಮಾನಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಈ ಸಂಬಂಧ ಹಲವು ಎಫ್‌ಐಆರ್‌ಗಳು ದಾಖಲಾಗಿವೆ.
ಈ ನಡುವೆ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬೆದರಿಕೆ ವಿಷಯವು ಬುಧವಾರ ಸಂಸದೀಯ ಸಮಿತಿಯ ಮುಂದೆ ಬಂದಿತು. ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಂಸದರಿಗೆ ಮಾಹಿತಿ ನೀಡಿದರು.