ಕೊಚ್ಚಿ: ವರ್ಚುವಲ್ ಬುಕ್ಕಿಂಗ್ ಮೂಲಕ ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳ ಸಂಖ್ಯೆಯನ್ನು 80 ಸಾವಿರಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಿರ್ಧಾರ ತಪ್ಪು ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್. ರಾಜಶೇಖರನ್ ಆರೋಪಿಸಿದ್ದಾರೆ.
ವರ್ಚುವಲ್ ಕ್ಯೂನಲ್ಲಿ ಬುಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಬರಿಮಲೆ ಭಕ್ತರಿಗೆ ದರ್ಶನ ನಿರಾಕರಿಸುವ ನಿರ್ಧಾರದಿಂದ ಶಬರಿಮಲೆಗೆ ತೀವ್ರ ವ್ರತ ಆಚರಿಸಿ ಬರುವ ಭಕ್ತರಿಗೆ ಸಾಕಷ್ಟು ತೊಂದರೆಯಾಗಲಿದೆ. ಧಾರ್ಮಿಕ ಆಚರಣೆಯೂ ಸಾಂವಿಧಾನಿಕ ಹಕ್ಕು. ವರ್ಚುವಲ್ ಬುಕ್ಕಿಂಗ್ ಬಗ್ಗೆ ತಿಳಿಯದೆ ದೇಶದ ವಿವಿಧೆಡೆಯಿಂದ ಆಗಮಿಸುವ ಅಯ್ಯಪ್ಪ ಭಕ್ತರಿಗೆ ಈ ನಿರ್ಧಾರದಿಂದ ಸಾಕಷ್ಟು ತೊಂದರೆಯಾಗಲಿದೆ. ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರನ್ನು ಸಂಪರ್ಕಿಸದೆ ಜಾರಿಗೆ ತಂದಿರುವ ಈ ವ್ಯವಸ್ಥೆಯನ್ನು ಮರುಪರಿಶೀಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಶಬರಿಮಲೆ ಮತ್ತೊಮ್ಮೆ ವಿವಾದದ ಕೇಂದ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಬರಿಮಲೆ ತೀರ್ಥಯಾತ್ರೆಯ ಅವಧಿಯು ನಿರ್ಬಂಧಿತ ಅವಧಿಯಾಗಿದೆ. ಆ ಅವಧಿಯನ್ನು ತಿರುಪತಿ ದರ್ಶನಕ್ಕೆ ಸಮೀಕರಿಸುವ ನಿರ್ಧಾರ ಸರಿಯಲ್ಲ. ತಿರುಪತಿ ದೇವಸ್ಥಾನ ವಷರ್Àವಿಡೀ ದರ್ಶನ ಮಾಡುವ ದೇವಸ್ಥಾನವಾಗಿದ್ದು, ಮಂಡಲ ಋತುವಿನಲ್ಲಿ ಆಗಮಿಸುವ ಎಲ್ಲ ಭಕ್ತರಿಗೂ ದರ್ಶನ ನೀಡಲು ವೈಜ್ಞಾನಿಕ ವ್ಯವಸ್ಥೆ ಮಾಡದೆ ಸರ್ಕಾರ ಮೂರ್ಖತನದ ನಿರ್ಧಾರ ಕೈಗೊಂಡು ಶಬರಿಮಲೆಯ ಪಾವಿತ್ರ್ಯತೆಗೆ ಮತ್ತೊಮ್ಮೆ ಮಸಿ ಬಳಿದಿದೆ.
ಭಸ್ಮ ಧಾರಣೆಗೆ ಟೆಂಡರ್ ಕರೆಯುವ ಅರ್ಥಹೀನ ನಿರ್ಧಾರ ಹಿಂತೆಗೆದುಕೊಂಡಂತೆ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ವಿ.ಆರ್. ರಾಜಶೇಖರನ್ ಆಗ್ರಹಿಸಿರುವರು.