ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ,ಕುಟುಂಬ ಆರೋಗ್ಯ ಕೇಂದ್ರ ಪೆರ್ಲ ಹಾಗೂ ಪ್ರಾಥಮಿಕ ಆರೋಗ್ಯ ಕೆಂದ್ರ ವಾಣೀನಗರ ಇದರ ಸಹಯೋಗದಿಂದ ಸ್ವರ್ಗ ಶಾಲೆಯಲ್ಲಿ ಹಿರಿಯ ನಾಗರಿಕರ ಆರೋಗ್ಯ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಯಸ್ ಅವರು ಉದ್ಘಾಟಿಸಿ 'ಹಿರಿಯ ನಾಗರಿಕರ ಕ್ಷೇಮ ಮತ್ತು ಆರೋಗ್ಯ ಕಾಪಾಡುವ ಕಾರ್ಯಕ್ರಮಗಳೊಂದಿಗೆ ಸನ್ನದ್ಧರಾಗಿದ್ದೇವೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅವರು ಕುಟುಂಬ, ಸಮಾಜಕ್ಕಾಗಿ ಹಲವಾರು ಕೊಡುಗೆಗಳನ್ನು ನೀಡಿ ನಮ್ಮ ನಡುವೆ ಬದುಕಿದ ಸಾಧಕರು ಎಂದು ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ. ವಹಿಸಿದರು. ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಎಸ್.ಬಿ ನರಸಿಂಹ ಪೂಜಾರಿ, ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ವೈದ್ಯ ಡಾ.ಕೇಶವ ನಾಯ್ಕ್, ಸಿ.ಡಿ.ಎಸ್. ಉಪಾಧ್ಯಕ್ಷೆ ಶಶಿಕಲಾ ಕೆ. ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ, ರಂಗ ನಿರ್ದೇಶಕ ಉದಯ ಸಾರಂಗ್ ಮನೋವೈಜ್ಞಾನಿಕ ಮನರಂಜನಾ ತರಗತಿ ನಡೆಸಿ ನವೋಲ್ಲಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರೇಮ ಎ.ಎಸ್. ಕೆದಂಬಾಯಿಮೂಲೆ, ಐತ್ತಪ್ಪ ನಾಯ್ಕ್ ದೇಲಂತಾರು, ಶಾರದಾ ಪಿ.ಎಸ್ ಕಟ್ಟೆ ಇವರನ್ನು ಅಭಿನಂದಿಸಲಾಯಿತು. ಆಶಾ ಕಾರ್ಯಕರ್ತೆ ಚಂದ್ರಾವತಿ ಎ.ಟಿ. ಪ್ರಾರ್ಥನೆ ಹಾಡಿದರು. ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿ ಹರೀಶ್ ಸ್ವಾಗತಿಸಿ, ಜೆ.ಪಿ.ಎಚ್.ಎನ್ ಭಾಗೀರಥಿ ಬಿ. ವಂದಿಸಿದರು. ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಎಂ ಕಾರ್ಯಕ್ರಮ ನಿರೂಪಿಸಿದರು.