ಮುಂಬೈ: 'ಮದುವೆಯಾಗಬೇಕೆಂದುಕೊಂಡಿದ್ದೆ. ಆದರೆ ಏಕೋ ಅದು ಕೈಗೂಡಲಿಲ್ಲ. ಹೆಂಡತಿ, ಮಕ್ಕಳಿಲ್ಲ ಎಂಬ ಒಂಟಿತನವೂ ಕಾಡಿತ್ತು. ಅದಕ್ಕಿಂತ ಹೆಚ್ಚಾಗಿ ಯಾರ ಕಾಳಜಿ ವಹಿಸುವ ಅಗತ್ಯವಿಲ್ಲ ಎಂಬುದು ಖುಷಿ ನೀಡಿತ್ತು'
ನಿನ್ನೆ ಅಗಲಿದ ರತನ್ ಟಾಟಾ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತಿದು.
ಕೈಗಾರಿಕೋದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ರತನ್ ಟಾಟಾ ಅವರಿಗೆ ವಿವಾಹವಾಗಿಲ್ಲ. ಆದರೆ, ಅವರು ನಟಿ, ನಿರೂಪಕಿ ಸಿಮಿ ಗರೆವಾಲ್ ಅವರ ಜೊತೆ ಡೇಟಿಂಗ್ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸಿಮಿ ಅವರೇ ಸಂದರ್ಶವೊಂದರಲ್ಲಿ ಒಪ್ಪಿಕೊಂಡಿದ್ದರು.
'ರತನ್ ಹಾಗೂ ನಾನು ತುಂಬಾ ಸಮಯದಿಂದ ಪರಿಚಿತರು. ಅವರಲ್ಲಿ ಪರಿಪೂರ್ಣತೆ ಇತ್ತು. ಹಾಸ್ಯಪ್ರಜ್ಞೆಯೂ ಇತ್ತು. ಅವರೊಬ್ಬ 'ಪರ್ಫೆಕ್ಟ್ ಜೆಂಟಲ್ ಮ್ಯಾನ್'. ಹಣ ಎಂದಿಗೂ ಅವರ ಚಾಲನಶಕ್ತಿ ಆಗಿರಲಿಲ್ಲ. ಅವರಿಗೆ ಭಾರತದಲ್ಲಿದ್ದಷ್ಟು ನಿರಾಳತೆ ವಿದೇಶದಲ್ಲಿ ಇರಲಿಲ್ಲ' ಎಂದು ಸಿಮಿ ಹೇಳಿದ್ದರು.
ಟಾಟಾ ಅವರ ನಿಧನಕ್ಕೆ ಎಕ್ಸ್‌ನಲ್ಲಿ ಸಂತಾಪ ಸೂಚಿಸಿರುವ ಸಿಮಿ, 'ನಿನ್ನ ಅಗಲಿಕೆ ತುಂಬಾ ನೋವು ತಂದಿದೆ. ವಿದಾಯ ಗೆಳೆಯ' ಎಂದು ಬರೆದುಕೊಂಡಿದ್ದಾರೆ.
ಮಾಜಿ ಗೆಳತಿಯ ಮುಂದೆಯೇ ಮದುವೆ ಬಗ್ಗೆ ಮಾತನಾಡಿದ್ದ ಟಾಟಾ!
ಸಿಮಿ ಅವರು ನಡೆಸಿಕೊಂಡು ಬರುತ್ತಿದ್ದ Rendezvous ಟಾಕ್ ಶೋದಲ್ಲಿ ಭಾಗವಹಸಿದ್ದ ರತನ್ ಟಾಟಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದರು. ಮದುವೆಯಾಗದೆ ಇರುವ ತನ್ನ ನಿರ್ಧಾರದ ಹಿಂದೆ ಹಲವಾರು ಕಾರಣಗಳಿವೆ ಎಂದು ಹೇಳಿದ್ದರು.
'ಮದುವೆಯಾಗದೇ ಇರುವುದಕ್ಕೆ ಹಲವಾರು ಕಾರಣಗಳಿವೆ. ಸಮಯ, ನಾನು ಆಯ್ದುಕೊಂಡಿದ್ದ ಕೆಲಸ ಎಲ್ಲವೂ ಇದರಲ್ಲಿ ಸೇರಿವೆ. ಒಮ್ಮೆ ಮದುವೆ ಹಂತದವರೆಗೂ ಬಂದಿದ್ದೆ, ಆದರೆ ಅದು ಕೈಗೂಡಿಲ್ಲ'
'ಕೆಲವೊಂದು ಬಾರಿ ಹೆಂಡತಿ, ಮಕ್ಕಳಿಲ್ಲ ಎಂಬ ಒಂಟಿತನ ಕಾಡಿತ್ತು. ಅದಕ್ಕಾಗಿ ಹಂಬಲಿಸಿದ್ದೆ. ಆದರೆ, ಯಾರ ಕಾಳಜಿ ವಹಿಸುವ ಅಗತ್ಯವಿಲ್ಲ ಎಂಬುದು ಸಮಾಧಾನ ತಂದಿತ್ತು' ಎಂದಿದ್ದರು.