ಚೆನ್ನೈ: ಕೊಯಮತ್ತೂರಿನ ಸರ್ಕಾರಿ ಭಾರತಿಯಾರ್ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಸಂಶೋಧನಾ ವಿದ್ಯಾರ್ಥಿಯೊಬ್ಬರು 'ವಿ.ವಿಯ ಪಿಎಚ್.ಡಿ ಮಾರ್ಗದರ್ಶಕರು ವಿದ್ಯಾರ್ಥಿಗಳ ಬಳಿ ಲಂಚ ಪಡೆಯುವುದಲ್ಲದೆ, ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ' ಎಂದು ಆರೋಪಿಸಿ ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಪತ್ರವೊಂದನ್ನು ನೀಡಿದ್ದು, ಸಂಚಲನ ಮೂಡಿಸಿದೆ.
ವಿಶ್ವವಿದ್ಯಾಲಯದ 39ನೇ ಘಟಿಕೋತ್ಸವ ಸೋಮವಾರ ನಡೆಯುತ್ತಿತ್ತು. ಈ ವೇಳೆ ರಾಜ್ಯಪಾಲರಿಂದ ಪಿಎಚ್.ಡಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ ಸಂಶೋಧನಾರ್ಥಿ ಎ. ಪ್ರಕಾಶ್ ಅವರು ಮಾರ್ಗದರ್ಶಕರು ನೀಡುವ ಕಿರುಕುಳಗಳ ಬಗ್ಗೆ ಪತ್ರ ನೀಡುವ ಮೂಲಕ ಗಮನ ಸೆಳೆದರು.
'ಮಾರ್ಗದರ್ಶಕರು ಸಂಶೋಧನಾ ವಿದ್ಯಾರ್ಥಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಪಿಎಚ್.ಡಿಯ ಮೌಖಿಕ ಪರೀಕ್ಷೆಗೂ (ವೈವಾ) ಮುನ್ನ ಸಾಕಷ್ಟು ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ವಿ.ವಿಯ ವಿದ್ಯಾರ್ಥಿನಿಲಯದಲ್ಲಿ ಮೂಲ ಸೌಕರ್ಯದ ಕೊರತೆಯಿದೆ' ಎಂಬುದನ್ನು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಇತರ ಕೆಲ ವಿದ್ಯಾರ್ಥಿಗಳ ಜತೆಗೂಡಿ ಪ್ರಕಾಶ್ ಅವರು ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸುವಾಗ, ವೇದಿಕೆಯಲ್ಲಿದ್ದ ಕೆಲವರಿಂದ ವಿರೋಧ ವ್ಯಕ್ತವಾಯಿತು.
ಉನ್ನತ ಶಿಕ್ಷಣ ಸಚಿವ ಗೋವಿ ಚೆಜಿಯಾನ್ ಅವರು ವಿ.ವಿಯ ಕಲುಪತಿ ಸೇರಿದಂತೆ ಇತರ ಅಧಿಕಾರಿಗಳ ಜತೆ ವೇದಿಕೆಯಲ್ಲಿದ್ದರು. ಆದರೆ ವಿದ್ಯಾರ್ಥಿ ನೀಡಿದ ದೂರಿನ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
'ಸಂಶೋಧನಾ ವಿದ್ಯಾರ್ಥಿಗಳು ವಿ.ವಿ ವಿರುದ್ಧ ಮಾತನಾಡಲು ಹೆದರುತ್ತಾರೆ. ಕೆಲ ಮಾರ್ಗದರ್ಶಕರು ವಿದ್ಯಾರ್ಥಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಹಣ ಮತ್ತು ಚಿನ್ನಕ್ಕೆ ಬೇಡಿಕೆಯಿಡುತ್ತಾರೆ. ಮೌಖಿಕ ಪರೀಕ್ಷೆಗೂ ಮುನ್ನ ಊಟೋಪಚಾರಕ್ಕೆ ವ್ಯಯಿಸುವಂತೆ ಹೇಳುತ್ತಾರೆ. ಕೆಲ ಮಾರ್ಗದರ್ಶಕರಂತೂ ವಿದ್ಯಾರ್ಥಿಗಳ ಎಟಿಎಂ ಕಾರ್ಡ್‌ಗಳನ್ನು ಕೇಳುತ್ತಾರೆ. ಇನ್ನೂ ಕೆಲ ಮಾರ್ಗದರ್ಶಕರು ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ವೈಯಕ್ತಿಕ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ' ಎಂದು ಪ್ರಕಾಶ್ ಆರೋಪಿಸಿದ್ದಾರೆ.
ಸಂಶೋಧನಾರ್ಥಿಗಳ ಪ್ರಬಂಧ ಅಂತಿಮಗೊಳಿಸುವುದಕ್ಕೂ ಮುನ್ನ ₹ 50 ಸಾವಿರದಿಂದ ₹ 1 ಲಕ್ಷದಷ್ಟು ವ್ಯಯಿಸುವಂತೆ ಕೆಲ ಮಾರ್ಗದರ್ಶಕರು ಒತ್ತಡ ಹೇರುತ್ತಾರೆ ಎಂದು ಅವರು ದೂರಿದ್ದಾರೆ.