ಲಖನೌ: ಪ್ರಯಾಗ್ರಾಜ್ದಲ್ಲಿ ಮುಂದಿನ ವರ್ಷ ನಡೆಯಲಿರುವ 'ಮಹಾಕುಂಭ'ದ ವೇಳೆ 'ಸನಾತನಿ' ಅಧಿಕಾರಿಗಳನ್ನು ಮಾತ್ರ ನಿಯೋಜನೆ ಮಾಡುವಂತೆ ಮಠಾಧೀಶರು ಆಗ್ರಹಿಸಿದ್ದಾರೆ.
ಮಠಾಧೀಶರ ಸಂಘಟನೆಯಾದ ಅಖಿಲ ಭಾರತ ಅಖಾಡಾ ಪರಿಷತ್(ಎಐಎಪಿ) ಈ ಬೇಡಿಕೆ ಇಟ್ಟಿದೆ.
ಎಐಎಪಿ, 13 'ಅಖಾಡಾ'ಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ.
ಕುಂಭಮೇಳವು ಮುಂದಿನ ಜನವರಿ 14ರಂದು ಆರಂಭವಾಗಿ, ಫೆಬ್ರುವರಿ 26ಕ್ಕೆ ಮುಕ್ತಾಯಗೊಳ್ಳುವುದು. ಈ ವೇಳೆ, ಜನರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ 'ಪುಣ್ಯ ಸ್ನಾನ' ವಿಧಿ ಪೂರೈಸುತ್ತಾರೆ. ದೇಶ- ವಿದೇಶಗಳ ಬರುವ ಲಕ್ಷಾಂತರ ಜನರು ಈ ಮೇಳದಲ್ಲಿ ಪಾಲ್ಗೊಳ್ಳುವರು.
'ಕುಂಭ ಮೇಳ (ಮಹಾಕುಂಭ) ನಡೆಯುವ ಪ್ರದೇಶದಲ್ಲಿ ಕೇವಲ ಸನಾತನಿ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಸನಾತನಿಯಲ್ಲದ ಅಧಿಕಾರಿಗೆ ಈ ಪ್ರದೇಶದಲ್ಲಿ ಪ್ರವೇಶ ನೀಡಬಾರದು' ಎಂದು ಎಐಎಪಿ ಪ್ರಧಾನ ಕಾರ್ಯದರ್ಶಿ ಹಾಗೂ 'ಜುನಾ ಅಖಾಡಾ'ದ ಮಹಾಪೋಷಕ ಮಹಂತ ಹರಿ ಗಿರಿ ಅವರು ಇತ್ತೀಚೆಗೆ ನಡೆದ ಪರಿಷತ್ ಸಭೆಯಲ್ಲಿ ಹೇಳಿದರು.
'ಕುಂಭಮೇಳದಲ್ಲಿ ಸನಾತನಿಗಳಿಗಷ್ಟೆ ಪ್ರವೇಶ ನೀಡಬೇಕು. ಇದಕ್ಕಾಗಿ, ಪ್ರತಿಯೊಬ್ಬರ ಗುರುತಿನ ಚೀಟಿ ಪರಿಶೀಲಿಸಿದ ನಂತರವೇ ಒಳಗೆ ಬಿಡಬೇಕು' ಎಂದರು.
'ಕುಂಭಮೇಳ ಪ್ರದೇಶದಲ್ಲಿ ಸನಾತನಿಯಲ್ಲದ ಜನರಿಗೆ ಆಹಾರ ಮಳಿಗೆ ಅಳವಡಿಸಲು ಅವಕಾಶ ನೀಡಬಾರದು. ಪ್ರದೇಶದ ಸಮೀಪದಲ್ಲಿ ಕೂಡ ಮದ್ಯ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ನೀಡಬಾರದು' ಎಂದು ಎಐಎಪಿ ಒತ್ತಾಯಿಸಿದೆ.